
ನವದೆಹಲಿ: ಕೋವಿಡ್ 19 ವೈರಸ್ ಗೆ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆಯಿಂದ ದೃಢಪಟ್ಟ ಬೆನ್ನಲ್ಲೇ ಅಮೆರಿಕ ಸೇರಿದಂತೆ ಹಲವಾರು ದೇಶಗಳು ಭಾರತಕ್ಕೆ ದುಂಬಾಲು ಬಿದ್ದಿದೆ. ಅಷ್ಟೇ ಅಲ್ಲ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಮೇಲಿನ ರಫ್ತು ನಿಷೇಧಗೊಳಿಸದಿದ್ದರೆ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಕೂಡಾ ಒಡ್ಡಿದ್ದರು. ಆದರೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ರಾಮಾಯಣದ ದೃಷ್ಟಾಂತ ಉಲ್ಲೇಖಿಸಿರುವುದು ಹೆಚ್ಚು ಗಮನ ಸೆಳೆದಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ಮಹಾಮಾರಿಗೆ ಸೂಕ್ತ ಔಷಧ ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ 19 ಮಹಾಮಾರಿ ವಿರುದ್ಧ ಹೋರಾಡಲು ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮೇಲಿನ ನಿಷೇಧ ತೆರವುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ರಾಮಾಯಣವನ್ನು ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಭಗವಾನ್ ಹನುಮಂತ ಸಂಜೀವಿನಿ ಔಷಧ ತಂದುಕೊಟ್ಟಂತಾಗಿದೆ:
ರಾಮಾಯಣದಲ್ಲಿ ಶ್ರೀರಾಮನ ಪರಮ ಭಕ್ತ ಹನುಮಂತ ಸಂಜೀವಿನಿ ಪರ್ವತದಿಂದ ಔಷಧ ತಂದು ರಾಮನ ಸಹೋದರ ಲಕ್ಷ್ಮಣನನ್ನು ಬದುಕಿಸಿದ್ದ. ಅದೇ ರೀತಿ ಜೀಸಸ್ (ಯೇಸು) ಕೂಡಾ ಅನಾರೋಗ್ಯ ಪೀಡಿತರನ್ನು ತನ್ನ ಆತ್ಮೀಯ ಸ್ಪರ್ಶದಿಂದ ಗುಣಪಡಿಸಿದ್ದ. ಅದೇ ರೀತಿ ಭಾರತ ಕೂಡಾ ಕೋವಿಡ್ ಗೆ ಸಂಜೀವಿನಿಯಂತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ರಫ್ತು ಮಾಡಲು ಅನುವು ಮಾಡಿಕೊಡುವ ಮೂಲಕ ಹನುಮಂತ ಸಂಜೀವಿನಿ ಪರ್ವತ ಹೊತ್ತು ತಂದಂತೆ ನಮ್ಮ ದೇಶಕ್ಕೂ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ಬಂದು ತಲುಪುವಂತಾಗಲಿ ಎಂದು ಬೊಲ್ಸನಾರೋ ಪತ್ರ ಬರೆದಿದ್ದರು.
ಬ್ರೆಜಿಲ್ ಲ್ಯಾಟಿನ್ ಅಮೆರಿಕಾದ ದೊಡ್ಡ ದೇಶವಾಗಿದೆ. ಬೊಲ್ಸನಾರೋ ಗಣರಾಜ್ಯೋತ್ಸ ದಿನದಂದು ಭಾರತಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಲ್ಲದೇ ಭಾರತ ಮತ್ತು ಬ್ರೆಜಿಲ್ ನಡುವೆ ಹಲವು ವಿಷಯಗಳ ಬಗ್ಗೆ ದ್ವಿಪಕ್ಷೀಯ ಒಪ್ಪಂದ ನಡೆದಿತ್ತು. ತಮ್ಮ ದೇಶಕ್ಕೂ ಹೈಡ್ರೋಕ್ಸಿಕ್ಲೋರೋಕ್ವಿನ್ ರಫ್ತು ಮಾಡುವ ಮೂಲಕ ಬೆಂಬಲ ನೀಡಬೇಕೆಂದು ತಿಳಿಸಿರುವುದಾಗಿ ಬ್ರೆಜಿಲ್ ಅಧ್ಯಕ್ಷ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಹರಡದಂತೆ ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ಪ್ರಧಾನಿ ಬೊಲ್ಸನಾರೋ ಭಾರತದ ಪ್ರಧಾನಿ
ನರೇಂದ್ರ ಮೋದಿ ಅವರ ಜತೆ ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ವರದಿ ತಿಳಿಸಿದೆ.
Comments are closed.