ಅಂತರಾಷ್ಟ್ರೀಯ

ಅಪ್ಪ ಕೊರೋನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದರೆ ಮಗನನ್ನು ನೋಡಲು ಯಾರೂ ಇಲ್ಲದೆ ಮನೆಯಲ್ಲಿಯೇ ಕೊನೆಯುಸಿರೆಳೆದ !

Pinterest LinkedIn Tumblr

ಕೊರೋನಾ ವೈರಸ್ ಕಾರಣದಿಂದ ವಿಶ್ವದಲ್ಲಿ ಅನೇಕ ಕುಟುಂಬಗಳು ಪರಸ್ಪರ ಸಂಪರ್ಕವನ್ನೇ ಕಳೆದುಕೊಂಡಿವೆ. ಇನ್ನು ಕೆಲವರು ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಒಬ್ಬರ ಮುಖ ಮತ್ತೊಬ್ಬರು ನೋಡದ ಸ್ಥಿತಿ ಎದುರಾಗಿದೆ. ಇದೇ ರೀತಿಯ ಕರುಣಾಜನಕ ಘಟನೆಯೊಂದು ಚೀನಾದ ಹುಬೇಯ್​ನಲ್ಲಿ ನಡೆದಿದೆ.

ಹುಬೇಯ್​ನಲ್ಲಿ ವಿಶೇಷಚೇತನ ಮಗನೊಂದಿಗೆ ವಾಸವಾಗಿದ್ದ ಯಾನ್ ಕ್ಸಿಯೋವೆನ್ ಎಂಬ ವ್ಯಕ್ತಿಗೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಿದಾಗ ಕೊರೋನಾ ವೈರಸ್ ಲಕ್ಷಣಗಳು ಇರುವುದು ಪತ್ತೆಯಾಗಿತ್ತು. ಇದರಿಂದಾಗಿ ಕೂಡಲೇ ಆತನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. ಅಂದಿನಿಂದಲೂ ಆ ವ್ಯಕ್ತಿ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ, ಆ ವ್ಯಕ್ತಿಯ 17 ವರ್ಷದ ಮಗ ಯಾನ್​ ಚೆಂಗ್​ಗೆ ಮಾತನಾಡಲು, ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹುಟ್ಟುವಾಗಲೇ ಕಿವುಡನಾಗಿದ್ದ ಆತ ಪ್ರತಿಯೊಂದಕ್ಕೂ ಅಪ್ಪನ ಮೇಲೆ ಅವಲಂಬಿತನಾಗಿದ್ದ. ವೀಲ್​ಚೇರ್​ ಮೇಲೆಯೇ ದಿನಪೂರ್ತಿ ಕುಳಿತಿರುತ್ತಿದ್ದ ಆತನ ತಾಯಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅಪ್ಪನೇ ಆತನ ದಿನನಿತ್ಯದ ಎಲ್ಲ ಕಾರ್ಯಗಳನ್ನೂ ನೋಡಿಕೊಳ್ಳುತ್ತಿದ್ದ. ಮಗನನ್ನು ರೂಮಿನಲ್ಲಿ ವೀಲ್​ಚೇರ್ ಮೇಲೆ ಕೂರಿಸಿ, ಆಸ್ಪತ್ರೆಗೆ ತೆರಳಿದ್ದ ಅಪ್ಪ ತಕ್ಷಣವೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ.

ಇದರಿಂದಾಗಿ ಮಗನಿಗೆ ಊಟ ಹಾಕಲು, ಆತನ ದಿನನಿತ್ಯದ ಕೆಲಸಗಳನ್ನು ಮಾಡಲು ಯಾರೂ ಇರಲಿಲ್ಲ. ಮನೆಯೊಳಗೆ ಏಕಾಂಗಿಯಾಗಿದ್ದ ಮಗನನ್ನು ಯಾರಾದರೂ ನೋಡಿಕೊಳ್ಳಿ ಎಂದು ಆತನ ಅಪ್ಪ ಆಸ್ಪತ್ರೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದ. ತನ್ನ ಮಗನ ಪರಿಸ್ಥಿತಿಯನ್ನೂ ವಿವರಿಸಿದ್ದ. ಆಸ್ಪತ್ರೆಯ ವೈದ್ಯರು, ನೆಂಟರು, ಸ್ನೇಹಿತರೆಲ್ಲರ ಬಳಿ ತನ್ನ ಮಗನನ್ನು ನೋಡಿಕೊಳ್ಳುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದ. ಆದರೆ, ಯಾರೂ ಆತನ ಮನವಿಗೆ ಸ್ಪಂದಿಸಿರಲಿಲ್ಲ. ಕೊರೋನಾ ವೈರಸ್ ಪೀಡಿತನ ಮಗನ ಬಳಿ ಹೋದರೆ ತಮಗೂ ಆ ಸೋಂಕು ಅಂಟಬಹುದು ಎಂದು ಎಲ್ಲರೂ ಹಿಂದೇಟು ಹಾಕಿದ್ದರು.

ಅಪ್ಪನ ಬರುವಿಕೆಗಾಗಿ ಮನೆಯೊಳಗೆ ಕಾದು ಕಾದು ಸುಸ್ತಾದ ಮಗ ಅದಾದ ಒಂದು ವಾರದಲ್ಲಿ ವೀಲ್​ಚೇರ್ ಮೇಲೇ ಪ್ರಾಣ ಬಿಟ್ಟಿದ್ದಾನೆ. ಆತನ ಬಗ್ಗೆ ಕೇರ್ ತೆಗೆದುಕೊಳ್ಳಬೇಕೆಂದು ಊರಿನ ವೈದ್ಯರು, ಅಕ್ಕಪಕ್ಕದವರ ಬಳಿ ಕೇಳಿಕೊಂಡರೂ ಯಾರೂ ಗಮನ ಹರಿಸದ ಕಾರಣ 17 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಕಮ್ಯುನಿಸ್ಟ್​ ಪಕ್ಷದ ಕಾರ್ಯದರ್ಶಿ ಹಾಗೂ ಮೇಯರ್​ ಅವರನ್ನು ಅಮಾನತು ಮಾಡಲಾಗಿದೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸದ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. 17 ವರ್ಷದ ಯಾನ್ ಚೆಂಗ್ ಸಾವಿಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದಿಲ್ಲ. ಆತ ಊಟವಿಲ್ಲದೆ ನಿಶ್ಯಕ್ತಿಯಿಂದ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ.

Comments are closed.