ಅಂತರಾಷ್ಟ್ರೀಯ

ಊಟದ ವೇಳೆ ಮನೆಯವರಿಗೆ ಸೋಂಕಿದ ಕೊರೊನಾ – ಮೃತಪಟ್ಟ ಅಮ್ಮ, ಇಬ್ಬರು ಮಕ್ಕಳು

Pinterest LinkedIn Tumblr


ವಾಷಿಂಗ್ಟನ್: ಸಂಬಂಧಿಕರೊಂದಿಗೆ ಡಿನ್ನರ್ ಮಾಡುವಾಗ ನ್ಯೂಜೆರ್ಸಿಯ ಕುಟುಂಬವೊಂದಕ್ಕೆ ಕೊರೊನಾ ತಗುಲಿದ್ದು, ಸೋಂಕಿನಿಂದ ಬಳಲುತ್ತಿದ್ದ ಒಂದೇ ಕುಟುಂಬದ 7 ಮಂದಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಗ್ರೇಸ್ ಫಸ್ಕೋ(73), ರೀಟಾ(55) ಹಾಗೂ ಕಾರ್ಮಿನ್ ಫಸ್ಕೋ ಕೊರೊನಾದಿಂದ ಸಾವನ್ನಪ್ಪಿದ ದುರ್ದೈವಿಗಳು. ಸಂಬಂಧಿಕರ ಜೊತೆ ಡಿನ್ನರ್ ಮಾಡಿದ ಬಳಿಕ ಗ್ರೇಸ್ ಅವರ ಮನೆಮಂದಿಗೆಲ್ಲಾ ಸೋಂಕು ತಗುಲಿತ್ತು. ಒಟ್ಟು 7 ಮಂದಿಗೆ ಸೋಂಕು ತಗುಲಿತ್ತು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ದುರಾದೃಷ್ಟವಶಾತ್ ಸೋಂಕು ಹೆಚ್ಚಾಗಿ ಕೆಳೆದ 5 ದಿನಗಳ ಹಿಂದೆ ಗ್ರೇಸ್ ಅವರ ಮಗಳು ರೀಟಾ ಸಾವನ್ನಪ್ಪಿದ್ದರು. ಆ ಬಳಿಕ ಬುಧವಾರ ಕಾರ್ಮಿನ್ ಅವರು ಸೋಂಕಿಗೆ ಬಲಿಯಾಗಿದ್ದರು. ಈ ವಿಚಾರ ತಾಯಿ ಗ್ರೇಸ್‍ಗೆ ತಿಳಿದಿರಲಿಲ್ಲ. ಮಗ ತೀರಿಹೋದ ಕೆಲ ಗಂಟೆಗಳಲ್ಲೇ ತಾಯಿಯನ್ನು ಕೂಡ ಕೊರೊನಾ ಬಲಿಪಡೆದಿದೆ. ಹೀಗೆ ಒಂದೇ ಕುಟುಂಬ ಮೂವರು ಒಬ್ಬರ ಮೇಲೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.

ಗ್ರೇಸ್ ಅವರ ಉಳಿದ 4 ಮಂದಿ ಮಕ್ಕಳಿಗೂ ಸೋಂಕು ತಗುಲಿದ್ದು, ಈ ಕುಟುಂಬದ ಸಂಪರ್ಕದಲ್ಲಿದ್ದ ಸುಮಾರು 20 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಶಂಕೆ ಇರುವ ಕಾರಣಕ್ಕೆ 20 ಮಂದಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಬಗ್ಗೆ ಫಸ್ಕೋ ಅವರ ಸಹೋದರಿ ಮಾತನಾಡಿ, ಇದು ವಿನಾಶಕಾರಿ ವಿಚಾರ ನನ್ನ ಸಹೋದರಿ, ಸಹೋದರ, ತಾಯಿಯನ್ನು ಕಳೆದುಕೊಂಡು ಬಹಳ ದುಃಖವಾಗುತ್ತಿದೆ. ನಮ್ಮ ಕುಟುಂಬಕ್ಕೆ ಸಹಾಯ ಬೇಕಿದೆ, ಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ.

ಕುಟುಂಬದ ಇತರೆ ಸದ್ಯಸರನ್ನು ತಪಾಸಣೆ ಮಾಡಿ ಗೃಹಬಂಧನದಲ್ಲಿ ಇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಸೋಂಕು ಶಂಕಿತ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಜಗತ್ತಿನಾದ್ಯಂತ 2,18,000 ಮಂದಿಗೆ ಸೋಂಕು ತಗುಲಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಅಮೆರಿಕದಲ್ಲಿ 50 ರಾಜ್ಯದಲ್ಲಿ ಸೋಂಕು ಹರಡಿದ್ದು, 150 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 9,400 ಕೊರೊನಾ ದೃಢಪಟ್ಟ ಪ್ರಕರಣಗಳು ವರದಿಯಾಗಿದೆ.

Comments are closed.