ಮಿಸೌರಿ: ಇತ್ತೀಚೆಗೆ ಒಂದು ದಿನ 17 ವರ್ಷದ ಯುವಕನೋರ್ವನ ತಂದೆ ಆತಂಕದಿಂದ, ಅವಸರದಿಂದ ನವಜಾತ ಶಿಶುವನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋದ. ಆ ಮಗುವನ್ನು ನೋಡಿದ ವೈದ್ಯರಿಗೆ ಏನೋ ಅನುಮಾನ.
ಅವರು ಕೇಳಿದ ಯಾವ ಪ್ರಶ್ನೆಗಳಿಗೂ ಆ ವ್ಯಕ್ತಿ ಸರಿಯಾಗಿ ಉತ್ತರ ಕೊಡದೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದರು. ಹೀಗೆ ಅನುಮಾನ ಬರುವಂತೆ ನಡೆದುಕೊಂಡ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹೊರಬಿದ್ದಿದ್ದು ಶಾಕಿಂಗ್ ವಿಷಯ.
ಅಮೆರಿಕದ ಮಿಸೌರಿಯ ಫ್ರಾನ್ಸಿಸ್ಕೊ ಜೇವಿಯರ್ ಗೊನ್ಜಾಲೆಜ್-ಲೋಪೆಜ್ ಎಂಬಾತ ತನ್ನ 17 ವರ್ಷದ ಮಗ ಮಾಡಿದ ಎಡವಟ್ಟನ್ನು ಮುಚ್ಚಿಡಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಈಗ ತಂದೆ-ಮಗ ಇಬ್ಬರ ಮೇಲೆಯೂ ಪೊಲೀಸ್ ಪ್ರಕರಣ ದಾಖಲಾಗಿದೆ.
ಮಗುವಿನ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಫ್ರಾನ್ಸಿಸ್ಕೊ ಜೇವಿಯರ್ ಗೊನ್ಜಾಲೆಜ್-ಲೋಪೆಜ್ ನ ಮಗ ನಾರ್ವಿನ್ ಲಿಯೊನಿಡಾಸ್ ಲೋಪೆಜ್-ಕ್ಯಾಂಟೆ ಅದು ತನ್ನದೇ ಎಂದು ಒಪ್ಪಿಕೊಂಡ. ಆದರೆ ಆ ಮಗು ಹುಟ್ಟಿದ್ದು 11 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಎಂಬುದು ದುರಂತ.
ತನ್ನ ಸಂಬಂಧಿಯೇ ಆದ 11 ವರ್ಷದ ಬಾಲಕಿಯೊಂದಿಗೆ ಸುಮಾರು 100 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ, ವಾರಕ್ಕೆ ಎರಡು ಬಾರಿ ಆಕೆಯೊಂದಿಗೆ ಸೆಕ್ಸ್ ಮಾಡುತ್ತಿದ್ದು, ಆದರೆ ಆಕೆ ಗರ್ಭಿಣಿಯಾಗಿದ್ದು ನನಗೆ ಗೊತ್ತಿಲ್ಲ ಎಂದು ಲಿಯೊನಿಡಾಸ್ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.
ಬಾಲಕಿ ಕೆಲವೇ ದಿನಗಳ ಹಿಂದೆ ಮನೆಯ ಬಾತ್ಟಬ್ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಅದನ್ನು ನೋಡಿದ ಯುವಕನ ಅಪ್ಪ ಫ್ರಾನ್ಸಿಸ್ಕೊ ಜೇವಿಯರ್ ಗೊನ್ಜಾಲೆಜ್-ಲೋಪೆಜ್ ಲಗುಬಗೆಯಿಂದ ಅದನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಮೊದಲು, ಈ ಮಗುವನ್ನು ತನ್ನ ಮನೆಯ ಎದುರು ಯಾರೋ ಇಟ್ಟುಹೋಗಿದ್ದರು ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅದಕ್ಕಿನ್ನೂ ಹೊಕ್ಕುಳಬಳ್ಳಿ ಹಾಗೇ ಇತ್ತು. ಅದನ್ನು ನೋಡಿದರೆ ಯಾರೋ ಇಟ್ಟು ಹೋದಂತೆ ಕಾಣುತ್ತಿರಲಿಲ್ಲ. ಹಾಗಾಗೇ ಅನುಮಾನ ಬಂದು ವೈದ್ಯರು ಪೊಲೀಸರನ್ನು ಕರೆಸಿದರು. ಪೊಲೀಸರ ವಿಚಾರಣೆ ತೀವ್ರವಾದಾಗ ಆತನ ಮಗನೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ.
ಅದಾದ ಬಳಿಕ ಅಪ್ಪ ಫ್ರಾನ್ಸಿಸ್ಕೊ ಜೇವಿಯರ್ ಉಲ್ಟಾ ಹೊಡೆದಿದ್ದಾನೆ. ನನಗೆ ನನ್ನ ಮಗ ಮಾಡಿದ ಅಪರಾಧ ಗೊತ್ತಿರಲಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾನೆ.
ಲಿಯೊನಿಡಾಸ್ ಲೋಪೆಜ್-ಕ್ಯಾಂಟೆ ವಿರುದ್ಧ ಪೊಲೀಸರು ಅಪ್ತಾಪ್ತೆ ಮೇಲೆ ಅತ್ಯಾಚಾರ, ಅಪ್ರಾಪ್ತೆಯೊಂದಿಗೆ ಕಾನೂನು ಬದ್ಧವಲ್ಲದ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣ ದಾಖಲಿಸಿದ್ದಾರೆ. ಈತ ಆರೋಪ ಸಾಬೀತಾಗಿ ಅಪರಾಧಿ ಎಂದು ಪರಿಗಣಿಸಲ್ಪಟ್ಟರೆ ಜೀವಾವಧಿ ಶಿಕ್ಷೆ ಅನುಭವಿಸುತ್ತಾನೆ.
ಅಷ್ಟೇ ಅಲ್ಲದೆ, ಮಗನ ತಪ್ಪನ್ನು ಮುಚ್ಚಿಡಲು ಯತ್ನಿಸಿದ ಅಪ್ಪನ ವಿರುದ್ಧವೂ ಪ್ರಕರಣ ದಾಖಲಾಗಿದೆ.
Comments are closed.