ಅಂತರಾಷ್ಟ್ರೀಯ

ಕೊರೋನಾ ವೈರಸ್ ಗೆ ಚೀನಾದಲ್ಲಿ ಸಾವಿನ ಸಂಖ್ಯೆ 132ಕ್ಕೆ ಏರಿಕೆ

Pinterest LinkedIn Tumblr


ವುಹಾನ್: ಕೊರೋನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರಿಸಿದ್ದು ಮೃತರ ಸಂಖ್ಯೆ 132ಕ್ಕೇ ಏರಿದೆ. ಸೋಂಕು ಪೀಡಿತರ ಸಂಖ್ಯೆ ಪ್ರತಿ ಕ್ಷಣ ಏರುತ್ತಿದ್ದು ಈಗಾಗಲೇ 6000 ಹೊಸ ಪ್ರಕರಣಗಳು ಪತ್ತೆಯಾಗಿರುವ ಖಚಿತ ಮಾಹಿತಿಯನ್ನು ರಾಷ್ಟ್ರೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಒಂದೇ ದಿನ 1459 ಜನರಿಗೆ ಈ ವೈರಾಣು ತಗಲಿರುವ ಮಾಹಿತಿ ಹೊರಬಿದ್ದಿದೆ. ಪ್ರಮುಖ ನಗರಗಳಾದ ಬೀಜಿಂಗ್ ನಲ್ಲಿ 91 ಜನರು ಮತ್ತು ಶಾಂಘೈ ನಲ್ಲಿ 80 ಜನರಿಗೆ ಸೋಂಕು ತಗುಲಿದೆ.

ಚೀನಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಈ ವೈರಸ್ ಗೆ 9238 ಜನರು ತುತ್ತಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಜಗತ್ತಿನೆಲ್ಲೆಡೆ ಈ ವೈರಸ್ ಹರಡದಂತೆ ಭಾರೀ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದ್ದು , ಜಪಾನ್ ತನ್ನ 200 ಪ್ರಜೆಗಳನ್ನು ಹಾಗೂ ಅಮೇರಿಕಾ ತನ್ನ ದೇಶದ 240 ಪ್ರಜೆಗಳನ್ನು ಏರ್ ಲಿಫ್ಟ್ ಮೂಲಕ ವಾಪಾಸ್ ಕರೆಸಿಕೊಂಡಿದೆ.

ಮಾರಕ ಸೋಂಕಿನಿಂದಾಗಿ ವುಹಾನ್ ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ದೊಡ್ಡ ದೊಡ್ಡ ಉದ್ಯಮಗಳು ಮನೆಯಿಂದಲೇ ಕೆಲಸ ಮಾಡುವಂತೆ ತನ್ನ ನೌಕರರಿಗೆ ಸೂಚಿಸಿದೆ.

Comments are closed.