ಅಂತರಾಷ್ಟ್ರೀಯ

ಪಕ್ಕದಮನೆಯ ಬೆಕ್ಕಿಗೆ ತಿನ್ನಲು ಹಾಕಿ 18 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ…!

Pinterest LinkedIn Tumblr


ಬೆಕ್ಕು ಮನೆಯೊಳಗೇ ಇರುವುದು ತುಂಬಾ ಕಡಿಮೆ. ಮಾರ್ಜಾಲಗಳು ಅತ್ತಿಂದಿತ್ತ ಸುತ್ತಾಡುತ್ತಾ, ಹೊರಗೆಲ್ಲಾ ರೌಂಡ್ ಹೊಡೆಯುತ್ತಾ ತಮ್ಮ ಜೀವನದ ಖುಷಿ ಅನುಭವಿಸುತ್ತವೆ. ಕೆಲವೊಮ್ಮೆ ಕೆಲ ಬೆಕ್ಕುಗಳ ಪಕ್ಕದ ಮನೆಗೆ ಹೋಗುವುದೂ ಇದೆ. ಹೀಗೆ ಮನೆಗೆ ಬಂದ ಬೆಕ್ಕಿಗೆ ಒಂದಷ್ಟು ಜನ ತಿನ್ನುವುದಕ್ಕೂ ಹಾಕುತ್ತಾರೆ. ಈ ಆಪ್ತತೆ ಬೆಳೆದ ಬಳಿಕವಂತೂ ಬೆಕ್ಕುಗಳ ಸದಾ ಹೊಸ ಮನೆಗೆ ಬಂದು ಹೋಗುವುದು ಸಾಮಾನ್ಯ.

ಎರಡೂ ಮನೆಯೂ ತನ್ನದೇ ಮನೆ ಎಂಬ ಪ್ರೀತಿಯಿಂದ ಬೆಕ್ಕುಗಳು ಓಡಾಡಿಕೊಂಡಿರುತ್ತವೆ. ಆದರೆ, ಲಂಡನ್‌ನಲ್ಲಿ ಬೆಕ್ಕೊಂದು ಹೀಗೆ ನೆರೆ ಮನೆಗೆ ಹೋಗುವ ವಿಷಯವೇ ನಾಲ್ಕು ವರ್ಷದ ಕಾನೂನು ಹೋರಾಟಕ್ಕೆ ಕಾರಣವಾಗಿದೆ…!

ಇದು ನಡೆದಿರುವುದು ಪಶ್ಚಿಮ ಲಂಡನ್‌ನಲ್ಲಿ. ಇಲ್ಲಿನ ಜಾಕಿ ಮತ್ತು ಜಾನ್ ಹಾಲ್ ತಮ್ಮ ಮನೆಯ ಪ್ರೀತಿಯ ಬೆಕ್ಕು ಓಝೀ ಸದಾ ಮನೆಯಿಂದ ಹೊರಗೆ ಇರುವುದನ್ನು ಗಮನಿಸಿದ್ದರು. ತುಂಬಾ ಹೊತ್ತು ಮನೆಯಿಂದ ಹೊರಗಿರುವ ಓಝೀ ನಿಜವಾಗಿಯೂ ಹೋಗುವುದು ಎಲ್ಲಿಗೆ ಎಂಬ ಸಂಶಯ ಈ ದಂಪತಿಗೆ ಕಾಡಿತ್ತು. ಹೀಗಾಗಿ, ಬೆಕ್ಕಿನ ಕೊರಳಿಗೆ ಜಿಪಿಎಸ್ ಫಿಕ್ಸ್‌ ಮಾಡಿದ್ದರು. ಆಗ ಗೊತ್ತಾಗಿದ್ದು ತಮ್ಮ ಮುದ್ದಿನ ಬೆಕ್ಕು ನೆರೆಮನೆಯ ನಿಕೋಲಾ ಲೆಸ್ಬಿರೆಲ್ ಅವರ ಮನೆಯಲ್ಲಿ ತುಂಬಾ ಹೊತ್ತು ಕಳೆಯುತ್ತದೆ ಎಂಬ ಸಂಗತಿ. ನಿಕೋಲಾ ಲೆಸ್ಬಿರೆಲ್ ಬೆಕ್ಕಿಗೆ ತಿನ್ನಲು ಆಹಾರ ಹಾಕುತ್ತಿದ್ದರು. ಇದೇ ಕಾರಣಕ್ಕೆ ಬೆಕ್ಕು ಸದಾ ನಿಕೋಲಾ ಲೆಸ್ಬಿರೆಲ್ ಅವರ ಮನೆಗೇ ಹೋಗುತ್ತಿತ್ತು.

ಬೆಕ್ಕು ಯಾವಾಗಲೂ ಮನೆಯಿಂದ ದೂರ ಇರುವುದು ಈ ದಂಪತಿಗೆ ಮತ್ತು ಇವರ ಮಕ್ಕಳಲ್ಲಿ ಬೇಸರ ತರಿಸಿತ್ತು. ಹೀಗಾಗಿ, ನಿಕೋಲಾ ಲೆಸ್ಬಿರೆಲ್ ಬಳಿ ಜಾಕಿ ಮತ್ತು ಜಾನ್ ದಂಪತಿ ಬೆಕ್ಕಿಗೆ ಆಹಾರ ಹಾಕುವನ್ನು ನಿಲ್ಲಿಸಿ ಎಂದು ತುಂಬಾ ಸಲ ಹೇಳಿದ್ದರು. ಈ ಬಗ್ಗೆ ಮೊಬೈಲ್ ಸಂದೇಶವನ್ನೂ ಕಳುಹಿಸಲಾಗಿತ್ತು. ಇ ಮೇಲ್ ಕೂಡಾ ಮಾಡಿ ವಿಷಯ ತಿಳಿಸಿದ್ದರು. ಆದರೆ, ಪರಿಸ್ಥಿತಿ ಬದಲಾಗಲಿಲ್ಲ. ಬೆಕ್ಕು ಸದಾ ನಿಕೋಲಾ ಲೆಸ್ಬಿರೆಲ್ ಅವರ ಮನೆಗೇ ಹೋಗುತ್ತಿತ್ತು… ಪಾಪ… ಅದಕ್ಕೇನು ಗೊತ್ತಲ್ವಾ ಈ ಜಗಳದ ವಿಷಯ.

ಆದರೆ, ತುಂಬಾ ಸಲ ಹೇಳಿದ ಬಳಿಕವೂ ನಿಕೋಲಾ ಲೆಸ್ಬಿರೆಲ್ ಬೆಕ್ಕಿಗೆ ಆಹಾರ ಹಾಕುವುದನ್ನು ನಿಲ್ಲಿಸದೇ ಇದ್ದಾಗ ದಂಪತಿ ನಾಲ್ಕು ವರ್ಷಗಳ ಹಿಂದೆ ಲೀಗಲ್ ನೊಟೀಸ್ ಕಳುಹಿಸಿಕೊಟ್ಟಿದ್ದರು. ಈ ಮೂಲಕವಾದರೂ ಇವರು ಬೆಕ್ಕಿಗೆ ಆಹಾರ ನೀಡುವುದನ್ನು ನಿಲ್ಲಿಸಲು ಈ ದಂಪತಿ ಯತ್ನಿಸಿದ್ದರು. ಈ ವೇಳೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನಿಕೋಲಾ ಲೆಸ್ಬಿರೆಲ್ ವಾದಿಸುತ್ತಿದ್ದರು. ಹೀಗೆ ದಾಖಲೆ ಪರಿಶೀಲನೆ, ವಾದ ಪ್ರತಿವಾದ ಸುಮಾರು ನಾಲ್ಕು ವರ್ಷಗಳ ಕಾಲ ನಡೆದಿತ್ತು. ಆದರೆ, ಒಂದಷ್ಟು ದಿನಗಳ ಹಿಂದೆ ಪಕ್ಕದ ಮನೆಯ ಈ ನಿವಾಸಿಗಳು ಕೋರ್ಟಿನಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡರು. ನಿಕೋಲಾ ಲೆಸ್ಬಿರೆಲ್ ಅವರು ಕೂಡಾ ನಾನು ಇನ್ನು ಬೆಕ್ಕಿಗೆ ಆಹಾರ ಹಾಕುವುದಿಲ್ಲ. ಬೆಕ್ಕಿನ ಜಿಪಿಎಸ್ ಕಾಲರ್ ತೆಗೆಯುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಇಷ್ಟಾಗುವಾಗ ಲಾಯರ್ ಫೀಸ್ ಸುಮಾರು 20 ಸಾವಿರ ಪೌಂಡ್ ಅಂದರೆ ಭಾರತದ ಸುಮಾರು 18,49,338.55 ರೂಪಾಯಿ ಆಗಿತ್ತು…!

Comments are closed.