ಟೋಕಿಯೋ:ಜಪಾನ್ ನ ಕೋಟ್ಯಧೀಶ್ವರ, ಉದ್ಯಮಿಗೆ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಚಂದ್ರನಲ್ಲಿ ಸುತ್ತಾಡಲು ಗೆಳತಿಯೊಬ್ಬಳು ಬೇಕಾಗಿದ್ದಾಳಂತೆ! ಅದಕ್ಕಾಗಿ ಅಂತರ್ಜಾಲ ತಾಣದಲ್ಲಿ ಜಾಹೀರಾತನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಜಪಾನ್ ಯುಸಾಕು ಮೆಯಿಝಾವಾ ತನ್ನ ಮತ್ತು ಜಪಾನಿ ನಟಿ ಜತೆಗಿನ ಸಂಬಂಧ ಮುರಿದು ಬಿದ್ದಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ ತನಗೀಗ ಒಂಟಿತನ ನಿವಾರಿಸಲು 20ರ ಹರೆಯದ ಯುತಿಯೊಬ್ಬಳು ಬೇಕಾಗಿದ್ದು, ಅರ್ಜಿ ಹಾಕಬಹುದಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ತನ್ನ ಮಧ್ಯಂತರ ವಯಸ್ಸಿನಲ್ಲಿ ಒಂಟಿತನ ಕಾಡುತ್ತಿರುವುದಾಗಿ ಹೇಳಿಕೊಂಡಿರುವ ಶತಕೋಟಿ ಒಡೆಯ, ವಾಣಿಜ್ಯೋದ್ಯಮಿ ಯುಸಾಕು, ನನಗೆ ಹೇಗೆ ಬೇಕೋ ಆ ರೀತಿ ನಾನು ಕೊನೆತನಕ ಬದುಕಬೇಕು ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಇಬ್ಬರು ಪತ್ನಿಯರು ಹಾಗೂ ಮೂವರು ಮಕ್ಕಳನ್ನು ಹೊಂದಿದ್ದ ಯುಸಾಕು, ಇದೀಗ ಇಬ್ಬರಿಂದಲೂ ದೂರವಾಗಿದ್ದು, ಮೂರನೇ ಗೆಳತಿಗಾಗಿ ಹುಡುಕಾಟದಲ್ಲಿರುವುದಾಗಿ ವರದಿ ತಿಳಿಸಿದೆ. 44ರ ಹರೆಯದ ವಾಣಿಜ್ಯೋದ್ಯಮಿಗೆ ಮತ್ತೊಬ್ಬಳು ಯುವತಿ ಜತೆ ಪ್ರೀತಿಯನ್ನು ಮುಂದುವರಿಸಬೇಕು ಎಂಬುದಾಗಿ ಆಲೋಚಿಸುತ್ತಿದ್ದೇನೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಯಾಕೆ ಮೊದಲ ಮಹಿಳೆ ಚಂದ್ರನಲ್ಲಿಗೆ ಪ್ರಯಾಣ ಬೆಳೆಸಬಾರದು? ಎಂದು ಮೆಯಿಝಾವಾ ಟ್ಟೀಟರ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ನನಗೆ ಗೆಳತಿಯಾಗುವವಳು ಚಂದ್ರನಲ್ಲಿಗೆ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಸ್ಪೇಸ್ ಎಕ್ಸ್ ರಾಕೆಟ್…ಚಂದ್ರನ ಪ್ರಯಾಣ:
ಯುಸಾಕು ಜಪಾನಿನ ಅತೀ ದೊಡ್ಡ ಆನ್ ಲೈನ್ ಫ್ಯಾಶನ್ ಮಾಲ್ ಸ್ಟಾರ್ಟ್ ಟುಡೇ ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಜಪಾನಿನ ಯುಸಾಕು ಚಂದ್ರಯಾನ ಕೈಗೊಳ್ಳುವುದಾಗಿ ಈ ಹಿಂದೆ ಘೋಷಿಸಿದ್ದರು.
ಟೆಸ್ಲಾ ಸಂಸ್ಥೆಯ ಸಂಸ್ಥಾಪಕರಾಗಿದ್ದ ಎಲಾನ್ ಮಸ್ಕ್..ಕಳೆದ ಫೆಬ್ರುವರಿಯಲ್ಲಿ ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಫಾಲ್ಕನ್ ಹೆವಿಯನ್ನು ಉಡ್ಡಯನ ಮಾಡಿದ್ದರು. ಖಾಸಗಿ ಬಾಹ್ಯಾಕಾಶ ಕಂಪನಿಯಿಂದ ಈ ರಾಕೆಟ್ ಉಡ್ಡಯನ ಮಾಡಿದ್ದು ಜಾಗತಿಕವಾಗಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.
ಇದೀಗ ಎಲಾನ್ ಮಸ್ಕ್ ಅಮೆರಿಕದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರ ಫ್ಲೋರಿಡಾದಿಂದ ಸ್ಪೇಸ್ ಎಕ್ಸ್ ಕಂಪನಿಯ ಚೊಚ್ಚಲ ರಾಕೆಟ್ ಉಡ್ಡಯನಕ್ಕೆ ಸಿದ್ಧತೆ ನಡೆಯುತ್ತಿದೆ. ಇದು ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಯಾನವಾಗಿದೆ. ಸ್ಪೇಸ್ ಎಕ್ಸ್ ನಲ್ಲಿ ಚಂದ್ರಯಾನ ಕೈಗೊಳ್ಳಲು ಅರ್ಜಿ ಸಲ್ಲಿಸಲು 2020ರ ಜನವರಿ 17 ಕೊನೆಯ ದಿನಾಂಕವಾಗಿದೆ. ಚಂದ್ರಯಾನ ಕೈಗೊಳ್ಳುವವರ ಅಂತಿಮ ಆಯ್ಕೆಯನ್ನು ಮಾರ್ಚ್ ತಿಂಗಳಾಂತ್ಯದಲ್ಲಿ ನಿರ್ಧರಿಸಲಾಗುವುದು ಎಂದು ವರದಿ ತಿಳಿಸಿದೆ.
2023 ಅಥವಾ ನಂತರ ಎಲಾನ್ ಮಸ್ಕ್ ಅವರ ಮೊದಲ ಖಾಸಗಿ ಸ್ಪೇಸ್ ಎಕ್ಸ್ ರಾಕೆಟ್ ಚಂದ್ರಯಾನ ಪ್ರಯಾಣ ಆರಂಭಿಸಲಿದೆ. ಈ ವೇಳೆ ಮೆಯಿಝಾವಾ ಕೂಡಾ ತನ್ನೊಂದಿಗೆ 12ಕ್ಕೂ ಅಧಿಕ ಆರ್ಟಿಸ್ಟ್ ಗಳನ್ನು ಕರೆದೊಯ್ಯುವ ಯೋಚನೆ ಹೊಂದಿರುವುದಾಗಿ ವರದಿ ತಿಳಿಸಿದೆ.
Comments are closed.