ಕ್ರೀಡೆ

ಟೆನಿಸ್‌ಗೆ ಮರಳಿದ ಸಾನಿಯಾ ಮಿರ್ಜಾ

Pinterest LinkedIn Tumblr


ಹೋಬರ್ಟ್‌: ಭಾರತದ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ್ದಾರೆ. ಜ. 14ರಂದು ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕೂಟದ ಡಬಲ್ಸ್‌ನಲ್ಲಿ ಅವರು ಉಕ್ರೇನಿನ ನಾದಿಯಾ ಕಿಚೆನಾಕ್‌ ಜತೆ ಗೂಡಿ ಡಬಲ್ಸ್‌ನಲ್ಲಿ ಸೆಣಸಲಿದ್ದಾರೆ. ತಾಯಿಯಾದ ಬಳಿಕ ಸಾನಿಯಾ ಪಾಲ್ಗೊಳ್ಳುತ್ತಿರುವ ಮೊದಲ ವಿದೇಶಿ ಟೆನಿಸ್‌ ಪಂದ್ಯಾವಳಿ ಇದಾಗಿದೆ.

ಯಾವುದೇ ಶ್ರೇಯಾಂಕ ಹೊಂದಿಲ್ಲದ ಸಾನಿಯಾ ಮಿರ್ಜಾ- ನಾದಿಯಾ ಕಿಚೆನಾಕ್‌ ಮೊದಲ ಸುತ್ತಿನಲ್ಲಿ ಜಾರ್ಜಿಯಾದ ಓಕ್ಸಾನಾ ಕಲಾಶಿಂಕೋವಾ-ಜಪಾನಿನ ಮಿಯು ಕಾಟೊ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನಿನ 4ನೇ ಶ್ರೇಯಾಂಕದ ಜಾರ್ಜಿಯಾ ಗಾರ್ಸಿಯಾ ಪೆರೆಜ್‌-ಸಾರಾ ಸೊರಿಬೆಸ್‌ ಟೋರ್ಮೊ ಅವರನ್ನು ಎದುರಿಸುವ ಸಾಧ್ಯತೆ ಇದೆ.

ರೋಹನ್‌ ಬೋಪಣ್ಣ ಜತೆಗಾರ
ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲೂ ಸಾನಿಯಾ ಮಿರ್ಜಾ ಸ್ಪರ್ಧೆಗಿಳಿಯಲಿ ದ್ದಾರೆ. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಅವರು ಭಾರತದವರೇ ಆದ ರೋಹನ್‌ ಬೋಪಣ್ಣ ಜತೆಗೂಡಿ ಆಡುವರು. ಸಾನಿಯಾ-ಬೋಪಣ್ಣ 2016ರ ರಿಯೋ ಒಲಿಂಪಿಕ್ಸ್‌ ಬಳಿಕ ಮಿಶ್ರ ಡಬಲ್ಸ್‌ನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು ಸಾನಿಯಾ ಮಿರ್ಜಾ ಆಸ್ಟ್ರೇಲಿ ಯನ್‌ ಓಪನ್‌ನಲ್ಲಿ ಅಮೆರಿಕದ ರಾಜೀವ್‌ ರಾಮ್‌ ಜತೆಗೂಡಿ ಆಡಬೇಕಿತ್ತು.

ಆದರೆ ರಾಮ್‌ ಈ ಕೂಟದಿಂದ ಹಿಂದೆ ಸರಿದ ಕಾರಣ ಬೋಪಣ್ಣ ಜತೆಯಾದರು. ಬೋಪಣ್ಣ ಮೊನ್ನೆಯಷ್ಟೇ ವೆಸ್ಲಿ ಕೂಲೋಫ್ ಜತೆಗೂಡಿ ಕತಾರ್‌ ಓಪನ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದಾರೆ.

Comments are closed.