ಅಂತರಾಷ್ಟ್ರೀಯ

ನಮ್ಮ ಮೇಲೆ ದಾಳಿ ನಡೆದರೆ ಇರಾನ್​ನ 52 ಸ್ಥಳಗಳು ಕ್ಷಣಮಾತ್ರದಲ್ಲಿ ಧ್ವಂಸ: ಟ್ರಂಪ್

Pinterest LinkedIn Tumblr


ವಾಷಿಂಗ್ಟನ್ (ಜ.5)​: ನಮ್ಮ ಮೇಲೆ ಪ್ರತಿ ದಾಳಿ ನಡೆದರೆ ಇರಾನ್​ನ 52 ಸ್ಥಳಗಳು ಕ್ಷಣಮಾತ್ರದಲ್ಲಿ ಧ್ವಂಸವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಪ್ರತಿ ದಾಳಿಗೆ ಸಂಚು ರೂಪಿಸುತ್ತಿರುವ ಇರಾನ್​ಗೆ ಬಿಸಿ ಮುಟ್ಟಿಸಿದ್ದಾರೆ.

ಶುಕ್ರವಾರ ಮುಂಜಾನೆ ಬಾಗ್ದಾದ್​​ನಲ್ಲಿ ರಾಕೆಟ್​ ದಾಳಿ ನಡೆಸುವ ಮೂಲಕ ಇರಾನ್​ ಮೇಜರ್​ ಜನರಲ್​ ಖಾಸಿಂ ಸೊಲೆಮನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಾದ ಬೆನ್ನಲ್ಲೇ ಕೆಂಡಕಾರಿದ್ದ ಇರಾನ್, “ಅಮೆರಿಕ ಇಂತಹ ಅಪಾಯಕಾರಿ ಹಾಗೂ ಬುದ್ಧಿಹೀನ ಕೃತ್ಯಕ್ಕೆ ಕೈ ಹಾಕಬಾರದಿತ್ತು. ಇದರ ಮುಂದಿನ ಪರಿಣಾಮಗಳನ್ನು ಅಮೆರಿಕ ಖಂಡಿತವಾಗಿಯೂ ಅನುಭವಿಸಲಿದೆ,” ಎಂದು ಹೇಳಿತ್ತು. ಈ ಮೂಲಕ ಪ್ರತಿ ದಾಳಿಯ ಎಚ್ಚರಿಕೆ ನೀಡಿತ್ತು.

ಈ ವಿಚಾರವಾಗಿ ಡೊನಾಲ್ಡ್​ ಟ್ರಂಪ್​ ಇರಾನ್​ಗೆ ಎಚ್ಚರಿಕೆ ನೀಡಿದ್ದಾರೆ. “ಒಂದೊಮ್ಮೆ ನಮ್ಮ ಮೇಲೆ ದಾಳಿ ನಡೆದರೆ ಇರಾನ್​ನ ಪ್ರಮುಖ ಪ್ರದೇಶಗಳು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಾಗ ಸೇರಿ 52 ಸ್ಥಳಗಳ ಮೇಲೆ ಅತಿ ವೇಗವಾಗಿ ಹಾಗೂ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಯಲಿದೆ. ನಂತರ ಅಮೆರಿಕಕ್ಕೆ ಯಾವುದೇ ತೊಂದರೆಯೇ ಇರುವುದಿಲ್ಲ,” ಎಂದಿದ್ದಾರೆ ಅವರು.

ಶುಕ್ರವಾರ ಬಾಗ್ದಾದ್​​ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್​ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸೊಲೆಮನಿ ಮೃತಪಟ್ಟಿದ್ದ. ಖಾಸಿಂ ಸೊಲೆಮನಿಯನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್​ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಸೊಲೆಮನಿ ಇರಾನ್​ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. ಹೀಗಾಗಿ ಈತನನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್​ ಸಜ್ಜಾಗಿದೆ ಎನ್ನಲಾಗಿದೆ.

Comments are closed.