ಅಂತರಾಷ್ಟ್ರೀಯ

ಗುರುದ್ವಾರದ ನಂಕಾನ ಸಾಹಿಬ್​ನಲ್ಲಿ ಕಲ್ಲು ತೂರಾಟ; ಸಿಖ್ಖರ ಸುರಕ್ಷತೆ, ಭದ್ರತೆಗೆ ಕ್ರಮ ವಹಿಸಿ: ಪಾಕ್ ಸರ್ಕಾರಕ್ಕೆ ಭಾರತ ಆಗ್ರಹ

Pinterest LinkedIn Tumblr

ನವದೆಹಲಿ: ಶುಕ್ರವಾರ ಸಂಜೆ ಪಾಕಿಸ್ತಾನದ ಗುರುದ್ವಾರದಲ್ಲಿರುವ ಸಿಖ್ ಪವಿತ್ರ ಧಾರ್ಮಿಕ ಸ್ಥಳ ನಂಕಾನ ಸಾಹಿಬ್​ನಲ್ಲಿ ಕಲ್ಲುತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ. ಈ ವಿಧ್ವಂಸಕ ಕೃತ್ಯಕ್ಕೆ ಭಾರತ ವಿಷಾದ ವ್ಯಕ್ತಪಡಿಸಿದ್ದು, ತಕ್ಷಣವೇ ಪಾಕಿಸ್ತಾನ ಅಲ್ಲಿರುವ ಸಿಖ್​ ಸಮುದಾಯದ ಜನರ ಸುರಕ್ಷತೆ ಮತ್ತು ಭದ್ರತೆಗೆ ಕ್ರಮ ವಹಿಸಬೇಕು ಎಂದು ಹೇಳಿದೆ.

ಗುರುದ್ವಾರದ ಅಧಿಕಾರಿಯೊಬ್ಬರ ಮಗಳನ್ನು ಅಪಹರಿಸಲಾಗಿದೆ ಎಂಬ ಆರೋಪದ ಮೇಲೆ ಬಾಲಕನ ಕುಟುಂಬದ ನೇತೃತ್ವದಲ್ಲಿ ಕೋಪಗೊಂಡ ಸ್ಥಳೀಯರ ಗುಂಪು ಐತಿಹಾಸಿಕ ದೇಗುಲದ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರನ್ನು ಗುರುನಾನಕ್ ದೇವ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್‌ನಲ್ಲಿ ಹಿಂಸಾಚಾರಕ್ಕೆ ಒಳಪಡಿಸಲಾಗಿದೆ ಎಂದು ಭಾರತ ವಿದೇಶಾಂಗ ಸಚಿವಾಲಯ ಹೇಳಿದೆ. ಪವಿತ್ರ ಸ್ಥಳದಲ್ಲಿ ನಡೆದಿರುವ ಈ ವಿಧ್ವಂಸಕ ಘಟನೆಗೆ ಭಾರತ ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತದೆ. ಪಾಕಿಸ್ತಾನ ಸರ್ಕಾರ ಈ ಬಗ್ಗೆ ಶೀಘ್ರದಲ್ಲೇ ಕ್ರಮ ವಹಿಸಿ, ಅಲ್ಲಿರುವ ಸಿಖ್ ಸಮುದಾಯದ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದೆ. ಅಲ್ಲದೇ, ಈ ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆಯೂ ಪಾಕಿಸ್ತಾನ ಸರ್ಕಾರವನ್ನು ಭಾರತ ಒತ್ತಾಯಿಸಿದೆ.

Comments are closed.