ಅಂತರಾಷ್ಟ್ರೀಯ

ಹಿಮದೊಳಗೆ ಪತ್ತೆಯಾಗಿದ್ದು 18,000 ವರ್ಷ ಹಿಂದಿನ ಶ್ವಾನವೇ?

Pinterest LinkedIn Tumblr


ಅದು 2108ರಲ್ಲಿ ಸೈಬೀರಿಯಾದಲ್ಲಿ ಪತ್ತೆಯಾದ ಒಂದು ಮರಿಯೊಂದರ ಕಳೇಬರ. ಆದರೆ, ಈ ಕಳೇಬರಕ್ಕೆ ಏನೂ ಆಗಿಲ್ಲ. ಕಾರಣ, ಇದು ಹಿಮದೊಳಗೆ ಮುಚ್ಚಿ ಹೋಗಿತ್ತು. ಇದು ಎಷ್ಟು ವರ್ಷ ಹಳೆಯ ಮರಿ ಎಂಬ ಪ್ರಶ್ನೆಗೆ ತಜ್ಞರು ಸುಮಾರು 18,000 ವರ್ಷ ಎಂಬ ಉತ್ತರ ಕೊಡುತ್ತಾರೆ. ಸದ್ಯ ಈ ಮರಿಯ ಬಗೆಗಿನ ಅಧ್ಯಯನ ನಡೆಯುತ್ತಿದೆ. ಆ ಅಧ್ಯಯನವೇ ಕುತೂಹಲಕಾರಿಯಾಗಿದೆ.

ವಿಜ್ಞಾನಿಗಳಾದ ಲವ್ ಡೇಲೆನ್ ಮತ್ತು ಡೋವ್ ಸ್ಟಾಂಟನ್‌ ಕಳೆದ ಒಂದು ವರ್ಷದಿಂದ ಈ ಪ್ರಾಣಿಯ ದೇಹದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಆದರೆ, ಇದು ಶ್ವಾನದ ಮರಿಯಾ ಅಥವಾ ತೋಳದ ಮರಿಯಾ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಶೀಘ್ರ ಅಂತಿಮ ವರದಿ ನೀಡುವುದಾಗಿ ಇವರಿಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಅಧ್ಯಯನದಲ್ಲಿ ಇದು ಶ್ವಾನದ ಮರಿಯೇ ಎಂಬುದನ್ನು ದೃಢವಾದರೆ, ಇದು ಇತಿಹಾಸದಲ್ಲಿಯೇ ಸದ್ಯ ದೃಢಪಟ್ಟ ವಿಶ್ವದ ಅತೀ ಹಳೆಯ ಶ್ವಾನವೆಂಬ ದಾಖಲೆಯೂ ಸೃಷ್ಟಿಯಾಗುತ್ತದೆ. ಆದರೆ, ಈ ಬಗೆಗಿನ ಅಧ್ಯಯನಗಳು ಇನ್ನೂ ಮುಂದುವರಿದಿದೆ ಎಂದು ಡೇಲೆನ್ ಮತ್ತು ಸ್ಟಾಂಟನ್ ಹೇಳಿದ್ದಾರೆ.

ಡೇಲೆನ್ ಮತ್ತು ಸ್ಟಾಂಟನ್ ಇತ್ತೀಚೆಗೆ ಈ ಪ್ರಾಣಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದರು. ಈ ಫೋಟೋಗಳು ಸದ್ಯ ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇನ್‌ಸ್ಟ್ರಾಗ್ರಾಂನಲ್ಲಿ ಹರಿದಾಡುತ್ತಿದೆ.

ಹಿಮದೊಳಗೆ ಇದ್ದುದರಿಂದ ಈ ಮರಿಯ ದೇಹವನ್ನು ಹಾಗೆ ಸಂರಕ್ಷಿಸಿದಂತಿದೆ. ಪೂರ್ಣ ಪ್ರಮಾಣದ ಹಲ್ಲು, ರೋಮ ತುಂಬಿದ ಚರ್ಮ ಸೇರಿದಂತೆ ಮರಿಯ ದೇಹದ ಒಂದಷ್ಟು ಭಾಗಗಳು ಹಾಗೆಯೇ ಇದೆ. ಆದರೆ, ಇದು ಶ್ವಾನನಾ ಅಥವಾ ತೋಳನಾ ಎಂಬ ಗೊಂದಲ ಇರುವ ಕಾರಣ ಸದ್ಯಕ್ಕೆ ಇದಕ್ಕೆ ‘ಡೋಗೋರ್’ ಎಂದು ಹೆಸರಿಸಲಾಗಿದೆ.

`ಇದು ಇತ್ತೀಚೆಗೆ ಮೃತಪಟ್ಟ ಪ್ರಾಣಿಯಂತೆ ಭಾಸವಾಗುತ್ತದೆ. ಇದು ಸಿಂಹ, ಖಡ್ಗಮೃಗಗಳೊಂದಿಗೆ ಬದುಕಿದ ಪ್ರಾಣಿ. ಆದರೂ ಈ ಪ್ರಾಣಿಯನ್ನು ಇವುಗಳು ತಿಂದು ಮುಗಿಸುವ ಮೊದಲು ಈ ರೀತಿ ಸಂರಕ್ಷಿಸಲ್ಪಟ್ಟಿದ್ದನ್ನು ನೋಡುವಾಗ ಅದ್ಭುತವೆನಿಸುತ್ತದೆ’ ಎಂದು ಪ್ರಾಧ್ಯಾಪಕ ಡಾ ಡೇಲೆನ್ ಹೇಳಿದ್ದಾರೆ. `ಹಿಮದಡಿಯಲ್ಲಿ ಈ ಪ್ರಾಣಿ ಪತ್ತೆಯಾದಾಗ ಇದು ಎಷ್ಟು ವರ್ಷ ಹಳೆಯದ್ದು ಎಂಬ ಸಂಗತಿ ನಮಗಿಬ್ಬರಿಗೆ ತಿಳಿದಿರಲಿಲ್ಲ. ಆದರೆ, ಈ ದೇಹವನ್ನು ರೇಡಿಯೊ ಕಾರ್ಬನ್-ಡೇಟ್ ಮಾಡಿದಾಗ, ಇದು ಸುಮಾರು 18,000 ವರ್ಷಗಳಷ್ಟು ಹಳೆಯದು ಎಂಬ ಫಲಿತಾಂಶಗಳು ಬಂದಿತ್ತು. ಇದನ್ನು ನೋಡಿ ನಮಗೆ ಅಚ್ಚರಿಯಾಗಿತ್ತು. ಜೊತೆಗೆ ಕುತೂಹಲವೂ ಹೆಚ್ಚಿತ್ತು ಎಂಬುದು ಡೇಲನ್ ಮಾತು.

ಆರಂಭದಲ್ಲಿ ಇವರಿಬ್ಬರು ಇದು ತೋಳದ ಮರಿ ಇರಬಹುದು ಎಂದು ತಿಳಿದುಕೊಂಡಿದ್ದರು. ಆದರೆ, ಇನ್ನಷ್ಟು ಅಧ್ಯಯನ ನಡೆಸಿದಾಗ ಇದು ನಾಯಿಯ ಮರಿ ಆಗಿರುವ ಸಾಧ್ಯತೆಯೂ ಹೆಚ್ಚಿದೆ ಎಂಬ ಅಂಶ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಇವರಿಬ್ಬರ ಅಧ್ಯಯನ ಮುಂದೆ ಸಾಗುತ್ತಿದೆ. ಹೀಗಾಗಿ, ಆ ಅಧ್ಯಯನ ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.

Comments are closed.