ಅಂತರಾಷ್ಟ್ರೀಯ

ಪರೀಕ್ಷಾ ಒತ್ತಡ ನಿವಾರಿಸಲು ಸಮಾಧಿಯೊಳಗೆ ಮಲಗಲು ವಿಶ್ವವಿದ್ಯಾಲಯ ಸೂಚನೆ

Pinterest LinkedIn Tumblr


ಆಮ್ಸ್ಟರ್‌ಡ್ಯಾಮ್: ಬದುಕಿದ್ದಾಗ ಯಾರೊಬ್ಬರೂ ಕೂಡ ಸಮಾಧಿಯೊಳಗೆ ಮಲಗಲು ಖಂಡಿತ ಇಷ್ಟಪಡುವುದಿಲ್ಲ. ಆದರೆ, ವಿಶ್ವವಿದ್ಯಾಲಯವೊಂದು ತನ್ನ ವಿದ್ಯಾರ್ಥಿಗಳನ್ನು ಸಮಾಧಿಯಲ್ಲಿ ಮಲಗುವಂತೆ ಸೂಚಿಸುತ್ತಿದೆ. ಅದು ಕೂಡ ಒಳ್ಳೆಯ ಉದ್ದೇಶಕ್ಕೆ ಎಂಬುದೇ ಅಚ್ಚರಿಯಾಗಿದೆ.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ನೆದರ್​ಲ್ಯಾಂಡ್​ ನಿಜ್ಮೆಗೆನ್​ನಲ್ಲಿರುವ ರಾಡ್‌ಬೌಡ್ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳ ಸಹಾಯಕ್ಕಾಗಿ ಸಮಾಧಿಯೊಂದನ್ನು ಅಗೆದಿದೆ. ಇದನ್ನು ಧ್ಯಾನ ಸಮಾಧಿ ಎಂತಲೂ ಕರೆಯಲಾಗುತ್ತಿದೆ. ವಿದ್ಯಾರ್ಥಿಗಳು ಪರೀಕ್ಷಾ ಒತ್ತಡದಿಂದ ಹೊರಬರಲು ಹಾಗೂ ತಮ್ಮ ಅಸ್ತಿತ್ವವೇ ನಿರರ್ಥಕ ಎಂದು ತಿಳಿಯಲು ಸಹಕಾರಿಯಾಗಿದೆ ಎಂದು ವಿಶ್ವವಿದ್ಯಾಲಯ ಸಮರ್ಥಿಸಿಕೊಂಡಿದೆ.

ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ನಿವಾರಿಸುವ ಅತಿ ವಿನೂತನ ಪ್ರಯೋಗಗಳ ಪಟ್ಟಿಯಲ್ಲಿ ಈ ಪ್ರಯೋಗ ಮೊದಲ ಸ್ಥಾನ ಪಡೆದುಕೊಂಡಿದ್ದು, ಸಾಕಷ್ಟು ಪ್ರಖ್ಯಾತಿಯನ್ನು ಹೊಂದಿದೆ. ಒತ್ತಡ ನಿವಾರಣೆಯಲ್ಲಿ ಧ್ಯಾನ ಬಹಳ ಪರಿಣಾಮಕಾರಿ ಎಂಬುದು ಸತ್ಯ. ಆದರೆ, ಧ್ಯಾನ ಸಮಾಧಿ ಹೇಗೆ ಭಿನ್ನ ಎಂಬ ಪ್ರಶ್ನೆಯು ಎಲ್ಲರಲ್ಲೂ ಮೂಡಿದೆ. ಸದ್ಯ ರಾಡ್​ಬೌಡ್​ ವಿಶ್ವವಿದ್ಯಾಲಯ ಈ ಪ್ರಯೋಗವನ್ನು ನಡೆಸುತ್ತಿದ್ದು, ಇನ್ನೂ ಸಂಪೂರ್ಣ ಕಾರ್ಯಾಚರಣೆಗೆ ತಂದಿಲ್ಲ.

ಜೀವನದ ಕೊನೆ ಮತ್ತು ಸಾವು ವಿದ್ಯಾರ್ಥಿಗಳಿಗೆ ಕಷ್ಟಕರ ವಿಚಾರ. ಅದರಲ್ಲೂ 18,19 ಹಾಗೂ 20ರ ವಯಸ್ಸಿನಲ್ಲಿ ಸಾವಿನ ಬಗ್ಗೆ ಮಾತನಾಡುವುದು ತುಂಬಾ ಕಷ್ಟಕರ. ಆದರೆ, ವಿದ್ಯಾರ್ಥಿಗಳಿಗೆ ಭೂಮಿಯ ಮೇಲಿನ ತಮ್ಮ ಸಮಯದ ಬೆಲೆಯನ್ನು ತಿಳಿದುಕೊಳ್ಳಲು ಸಮಾಧಿ ಪ್ರಯೋಗ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಆತಂಕದಿಂದ ಹೊರಬರಲು ಇದು ಪ್ರಭಾವಶಾಲಿಯಾದ ಚಿಕಿತ್ಸಾ ವಿಧಾನವೂ ಆಗಿದೆ ಎಂದು ಪ್ರಯೋಗ ಸಂಸ್ಥಾಪಕ ಜಾನ್​ ಹ್ಯಾಕಿಂಗ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Comments are closed.