
ಕೊಲಂಬೊ: ಶ್ರೀಲಂಕಾದ ಪೆರೆಹಾರ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗಿದ್ದ ವೃದ್ಧ ಆನೆಯೊಂದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅನಾರೋಗ್ಯದಿಂದ ಅಸ್ಥಿಪಂಜರ ಕಾಣುವಷ್ಟು ಬಡಕಲಾಗಿದ್ದ ಆನೆಯ ಮೇಲೆ ವರ್ಣರಂಜಿತ ಬಟ್ಟೆಗಳನ್ನು ಹೊದಿಸಿ ಬೌದ್ಧ ಹಬ್ಬದ ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಶುಕ್ರವಾರ ತನಿಖೆಗೆ ಆದೇಶಿಸಿದೆ.
ತಿಕಿರಿ ಎಂಬ ಹೆಣ್ಣು ಆನೆಗೆ 70 ವರ್ಷ ವಯಸ್ಸಾಗಿದೆ. ಪ್ರತಿ ವರ್ಷ ಶ್ರೀಲಂಕಾದಲ್ಲಿ ನಡೆಯುವ ಪೆರೆಹಾರ ಉತ್ಸವದಲ್ಲಿ ಪಾಲ್ಗೊಳ್ಳುವ 60 ಆನೆಗಳಲ್ಲಿ ಈ ಆನೆಯು ಒಂದು. ಮೆರವಣಿಗೆಯಲ್ಲಿ ಭಾಗಿಯಾಗಲು 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪ್ರತಿ ದಿನ ಸಂಜೆ ಆಗಮಿಸುವ ಆನೆಗಳು ತಡರಾತ್ರಿಯವರೆಗೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತವೆ. ಪಟಾಕಿ ಸದ್ದು, ಹೊಗೆ ಹಾಗೂ ಜನರ ಸದ್ದುಗದ್ದಲದ ನಡುವೆ ಆನೆಗಳು ಸಾಕಷ್ಟು ಕಿಲೊಮೀಟರ್ಗಟ್ಟಲೇ ಕ್ರಮಿಸುತ್ತವೆ. ತಮ್ಮ ಸಂಭ್ರಮದಲ್ಲೇ ತೊಡಗಿದ್ದ ಯಾವೊಬ್ಬನು ಮುಖಕ್ಕೆ ಹೊಡೆಯುವ ಲೈಟ್ ಬೆಳಕನ್ನು ತಡೆಯದೇ ತಿಕಿರಿ ಆನೆಯ ಕಣ್ಣಿನಲ್ಲಿ ಬರುತ್ತಿದ್ದ ನೋವಿನ ಹನಿಯನ್ನು ಯಾರು ನೋಡಲಿಲ್ಲ. ಕಷ್ಟಪಟ್ಟು ಇಡುತ್ತಿದ್ದ ಅದರ ಹೆಜ್ಜೆಯನ್ನು ಯಾರು ಗಮನಿಸಲಿಲ್ಲ. ಇನ್ನೊಬ್ಬರಿಗೆ ತೊಂದರೆ ನೀಡಬಾರದು ಎಂಬ ಬುದ್ಧನ ಮಾತಿನಲ್ಲಿ ನಂಬಿಕೆ ಇಟ್ಟಿರುವ ನಾವು ಮೂಕಪ್ರಾಣಿಯ ರೋಧನೆಯನ್ನು ಗಮನಿಸಲೇ ಇಲ್ಲ ಎಂದು ಸೇವ್ ಎಲಿಫ್ಯಾಂಟ್ ಫೌಂಡೇಶನ್ ಎಂಬ ಫೇಸ್ಬುಕ್ ಖಾತೆಯಲ್ಲಿ ಬಡಕಲಾಗಿದ್ದ ತಿಕಿರಿ ಫೋಟೊ ಸಮೇತ ಬರೆಯಲಾಗಿದೆ.
ಸಾಕಷ್ಟು ವೈರಲ್ ಫೋಟೊ ಬಗ್ಗೆ ಸಾಕಷ್ಟು ಪ್ರಾಣಿ ಪ್ರಿಯರು ತಮ್ಮ ಆಕ್ರೋಶದ ಮಾತುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶ್ರೀಲಂಕಾದ ಪ್ರವಾಸೋದ್ಯಮ ಹಾಗೂ ಅರಣ್ಯ ಸಚಿವ ಜಾನ್ ಅಮರತುಂಗಾಗೆ ಮನವಿ ಮಾಡಿದ್ದಾರೆ.
ಇತ್ತ ಅತ್ಯಧಿಕ ದೂರು ಬರುತ್ತಿದ್ದಂತೆ ಎಚ್ಚೆತ್ತ ಸಚಿವರು ತಿಕಿರಿ ಆನೆಯನ್ನು ಮೆರವಣಿಗೆ ತಂದ ಬಗ್ಗೆ ಸಂಪೂರ್ಣ ವಿವರ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿ, ಮೆರವಣಿಗೆಯಲ್ಲಿ ವೃದ್ಧ ಆನೆಯನ್ನು ಬಳಸದಂತೆ ಸೂಚನೆ ನೀಡಿದ್ದಾರೆ. ದುರಾದೃಷ್ಟವಶಾತ್ 70 ವರ್ಷದ ತಿಕಿರಿ ಆನೆ ಮೆರವಣಿಗೆ ವೇಳೆ ಅನಾರೋಗ್ಯದಿಂದ ಕುಸಿದು ಬಿದ್ದಿದ್ದು, ಬದುಕಿಗಾಗಿ ಹೋರಾಟ ನಡೆಸುತ್ತಿದೆ.
Comments are closed.