ಅಂತರಾಷ್ಟ್ರೀಯ

ಆರ್ಟಿಕಲ್​ 370 ರದ್ದು: ಮುಗಿದ ಜಿಹಾದ್​ ಕಾಶ್ಮೀರ ಹೋರಾಟ ಒಂದು ಅಧ್ಯಾಯ ಎಂದ ಮಸೂದ್ ಅಜರ್

Pinterest LinkedIn Tumblr


ನವದೆಹಲಿ: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರ್ಕಾರದ ವಿರುದ್ಧ ಜಾಗತಿಕ ಉಗ್ರ ಮಸೂದ್​ ಅಜರ್​ ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾನೆ. ಅಲ್ಲದೆ, ಕಾಶ್ಮೀರದ ಮುಸ್ಲಿಮರು ಕಳೆದುಕೊಂಡ ಭೂಮಿಯನ್ನು ಉದ್ಯಮಿಗಳು ಇನ್ನು ಖರೀದಿ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾನೆ. ಅಜರ್​ನ ಈ ಹೇಳಿಕೆಗೆ ಸಂಬಂಧಪಟ್ಟ ಸಂದೇಶವೊಂದು ಟೆಲಿಗ್ರಾಂನಲ್ಲಿ ವೈರಲ್​ ಆಗಿದೆ ಎನ್ನಲಾಗಿದೆ.

ಸಾಂವಿಧಾನಿಕವಾಗಿ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370ನ್ನು ರದ್ದುಗೊಳಿಸುವ ಮೂಲಕ ನರೇಂದ್ರ ಮೋದಿ ತಮ್ಮ ಪಾದದ ಮೇಲೆಯೇ ಕೊಡಲಿ ಏಟು ಹಾಕಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ.

ಮುಜಾಹಿದ್ದೀನ್​ಗಳು ಅವರು ತಲುಪಬೇಕಾದ ಗಮ್ಯಸ್ಥಳದ ಸಮೀಪವೇ ಇದ್ದಾರೆ. ಇದರಿಂದ ಭಯಗೊಂಡ ಇರುವೆಗಳೂ ರೆಕ್ಕೆ ಬೆಳೆಸಿಕೊಂಡು ಹಾರಿಹೋಗುತ್ತಿವೆ. ನರಿಗಳೆಲ್ಲ ಪಟ್ಟಣದ ಕಡೆಗೆ ಪ್ರಯಾಣ ಬೆಳೆಸಿವೆ. ಮೋದಿ ಸರ್ಕಾರ ಅವಮಾನಿತಗೊಂಡಿದ್ದು ಸೋಲೊಪ್ಪಿಕೊಂಡಿದೆ. ನಾವು ಭಾರತದ ವಿರುದ್ಧ ನಡೆಸುತ್ತಿರುವ ಘಾಜ್ವಾ ಇ ಹಿಂದ್​ ( ಭಾರತವನ್ನು ವಶಪಡಿಸಿಕೊಳ್ಳಲು ಪಾಕ್​ನವರು ನಡೆಸುತ್ತಿರುವ ಯುದ್ಧ. ಅದನ್ನು ಅವರು ಪವಿತ್ರ ಹೋರಾಟವೆಂದೇ ಭಾವಿಸುತ್ತಾರೆ) ಸಮರ ಹಾಗೂ ‘ಜಿಹಾದ್​ ಕಾಶ್ಮೀರ’ ದ ಒಂದು ಅಧ್ಯಾಯ ಇಲ್ಲಿಗೆ ಮುಕ್ತಾಯಗೊಂಡಿತು ಎಂದು ಅಜಾದ್​ ಹೇಳಿದ್ದಾಗಿ ವೈರಲ್​ ಆದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದರೆ ಅಂಬಾನಿ, ಮಿತ್ತಲ್​, ಜಿಂದಾಲ್​ ಅವರು ಕಾಶ್ಮೀರವನ್ನು ಖರೀದಿಸುತ್ತಾರೆ. ನಂತರ ಅಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಿ ಹಣಗಳಿಸಬಹುದು. ಇದರಿಂದ ಕೇಂದ್ರಕ್ಕೆ ಲಾಭವಾಗುತ್ತದೆ. ಹಾಗೇ ಕಾಶ್ಮೀರಿ ಮುಸ್ಲಿಮರಿಗೆ ಅಲ್ಲಿ ಪ್ರತಿಬಂಧನೆ ವಿಧಿಸುವ ಮೂಲಕ ಅವರ ಅಸ್ತಿತ್ವ ಇಲ್ಲದಿರುವಂತೆ ಮಾಡಲು ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಆದರೆ ಅದೆಲ್ಲ ಬರಿ ಕನಸಾಗಿಯೇ ಉಳಿಯಲಿದೆ. ಅದೆಲ್ಲ ಆಗಲು ನಾವು ಬಿಡುವುದಿಲ್ಲ ಎಂದು ಮಸೂದ್​ ಅಜರ್​ ಹೇಳಿದ್ದಾನೆ.

ಮಸೂದ್​ ಅಜರ್​ನನ್ನು ವಿಶ್ವಸಂಸ್ಥೆ ಈಗಾಗಲೇ ಜಾಗತಿಕ ಉಗ್ರ ಎಂದು ಘೋಷಿಸಿದೆ. ಇದರಲ್ಲಿ ಭಾರತದ ಪಾತ್ರ ಪ್ರಮುಖವಾದದ್ದು. ಕಳೆದ ಸೋಮವಾರ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬಳಿಕ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಕಿಡಿಕಾರುತ್ತಿದೆ. ಈಗ ಉಗ್ರ ಮಸೂದ್​ ಅಜರ್​ ಕೂಡ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಒಳ್ಳೆಯದೇ ಆಯಿತು ಎಂದು ಹೇಳುತ್ತಲೇ ತನ್ನ ಅಸಮಾಧಾನ ಹೊರಹಾಕಿದ್ದಾನೆ.

Comments are closed.