ಅಂತರಾಷ್ಟ್ರೀಯ

ಕಾಶ್ಮೀರ ಬಿಕ್ಕಟ್ಟು: ವಿಶೇಷ ಸ್ಥಾನಮಾನ ರದ್ದು? ಅಮೆರಿಕ ಮಧ್ಯಪ್ರವೇಶದ ನಿರೀಕ್ಷೆಯಲ್ಲಿ ಪಾಕ್

Pinterest LinkedIn Tumblr


ನವದೆಹಲಿ(ಆ. 04): ಹೆಚ್ಚುವರಿ ಸೇನಾ ತುಕಡಿಗಳ ನಿಯೋಜನೆ ಹಾಗೂ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮಹತ್ತರ ಬೆಳವಣಿಗೆಯಾಗುವ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಉಗ್ರ ದಾಳಿಯ ನಿರೀಕ್ಷೆಯಲ್ಲಿ ಕಾಶ್ಮೀರದಲ್ಲಿ ಭದ್ರತೆ ಬಿಗಿಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಬೇರಿನ್ನಾವುದೋ ಘಟನೆ ಜರುಗುವ ಸಾಧ್ಯತೆ ಇಲ್ಲದಿಲ್ಲ. ರಾಜಕೀಯ ತಜ್ಞರು ಪ್ರಮುಖವಾಗಿ ಎರಡು ಸಾಧ್ಯತೆಗಳನ್ನು ಅಂದಾಜಿಸಿದ್ದಾರೆ. ಒಂದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಮತ್ತು 35ಎ ಅನ್ನು ಸಂವಿಧಾನದಿಂದ ತೆಗೆದುಹಾಕಬಹುದು. ಎರಡು, ಜಮ್ಮು-ಕಾಶ್ಮೀರವನ್ನು ಮೂರು ಹೋಳಾಗಿ ವಿಭಜಿಸಬಹುದು.

ಇವೆರೆಡರಲ್ಲಿ ಯಾವುದಾದರೂ ಕೂಡ ಕಾಶ್ಮೀರದಲ್ಲಿ ಜನರು ದಂಗೆ ಏಳುವ ಅಪಾಯವಿರುವುದರಿಂದ ಭದ್ರತೆ ಬಿಗಿಗೊಳಿಸಲಾಗಿರಬಹುದೆಂಬ ಅಭಿಪ್ರಾಯವಿದೆ. ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇಂದು ನೀಡಿದ ಹೇಳಿಕೆ ಕೂಡ ಇದರ ಸುಳಿವನ್ನು ನೀಡಿದೆ. ಕಾಶ್ಮೀರದ ವಿಚಾರದಲ್ಲಿ ಯಾವುದೇ ರಹಸ್ಯ ಕ್ರಮಗಳನ್ನ ತೆಗೆದುಕೊಳ್ಳುವುದಿಲ್ಲ. ಏನೇ ಆದರೂ ಸಂಸತ್​ನಲ್ಲಿ ಚರ್ಚಿಸಿಯೇ ನಿರ್ಣಯ ತೆಗೆದುಕೊಳ್ಳುತ್ತೇವೆ. ಸೋಮವಾರ ಅಥವಾ ಮಂಗಳವಾರದವರೆಗೂ ಸಂಯಮದಿಂದ ಕಾದುನೋಡಿ ಎಂದು ಕಾಶ್ಮೀರೀ ರಾಜ್ಯಪಾಲರು ಹೇಳಿರುವುದು ಕುತೂಹಲ ಮೂಡಿಸಿದೆ.

ಇತ್ತ, ಜಮ್ಮು-ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಆರ್ಟಿಕಲ್ 370 ಮತ್ತು 35ಎ ಅನ್ನು ಉಳಿಸಿಕೊಳ್ಳಲು ಪಣತೊಟ್ಟಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತಪ್ಪಿಸುವ ಯಾವುದೇ ಪ್ರಯತ್ನವನ್ನೂ ವಿಫಲಗೊಳಿಸಲು ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಪಿಡಿಪಿ ಪಕ್ಷಗಳು ನಿರ್ಧರಿಸಿವೆ.

ಇದರ ನಡುವೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಿಂದ ನೋಟೀಸ್ ಬಂದಿದೆ. ಜಮ್ಮು-ಕಾಶ್ಮೀರ ಬ್ಯಾಂಕ್​ನ ಛೇರ್ಮನ್ ಅವರು ಕೆಲ ಸಚಿವರ ಶಿಫಾರಸಿನ ಮೇಲೆ ನೇಮಕಾತಿ ನಡೆಸಿದ್ದಾರೆ. ಈ ಶಿಫಾರಸಿನಲ್ಲಿ ತಮ್ಮ ಪಾತ್ರ ಇದೆಯಾ ಎಂದು ಮುಫ್ತಿ ಅವರನ್ನು ಕೇಳಿ ಎಸಿಬಿ ನೋಟೀಸ್ ಕಳುಹಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, ಇದು ಕಾಶ್ಮೀರದ ರಾಜಕೀಯ ನೇತಾರರನ್ನು ಹಣಿಯುವ ಪ್ರಯತ್ನ ಎಂದು ಕಿಡಿಕಾರಿದ್ಧಾರೆ.

ಅತ್ತ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದಂತೆ ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಇದೇ ವೇಳೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಚಾರದಲ್ಲಿ ಅಮೆರಿಕದ ಮಧ್ಯ ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ. ಭಾರತದ ಸೇನಾ ಪಡೆಗಳು ಗಡಿಭಾಗದಲ್ಲಿ ಅಮಾಯಕ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿವೆ. ಅಂತಾರಾಷ್ಟ್ರೀಯ ಮಾನವತೆ ಕಾನೂನಿನ ಉಲ್ಲಂಘನೆ ಮಾಡುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಾಶ್ಮೀರದಲ್ಲಿ ಶಾಂತಿ ವ್ಯವಸ್ಥೆ ಹದಗೆಡಿಸುತ್ತಿರುವ ಈ ಬೆಳವಣಿಗೆಯನ್ನು ಗಮನಿಸಬೇಕು ಎಂದು ಇಮ್ರಾನ್ ಖಾನ್ ಕೋರಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ಅವರ ಮಧ್ಯಸ್ಥಿಕೆಗೆ ಕಾಲ ಕೂಡಿ ಬಂದಿದೆ ಎಂದೂ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ಧಾರೆ.

ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್​ನಲ್ಲಿ ಪಾಕ್ ಗಡಿಭಾಗದ ಮೂಲಕ ಭಾರತದೊಳಗೆ ಒಳನುಸುಳಿ ಬಂದಿದ್ದು 5-7 ಮಂದಿಯನ್ನು ಭಾರತೀಯ ಸೇನೆ ಕೊಂದು ಹಾಕಿತ್ತು. ಹತರಾದವರು ಪಾಕಿಸ್ತಾನೀ ಸೇನೆಗೆ ಸೇರಿದ ಬಿಎಟಿ ತಂಡಕ್ಕೆ ಸೇರಿದವರೆಂದು ಭಾರತ ಹೇಳಿದೆ. ಕೇರನ್ ಸೆಕ್ಟರ್​ನಲ್ಲಿ ಅನಾಥವಾಗಿ ಬಿದ್ದಿರುವ ಈ ಮೃತದೇಹಗಳನ್ನು ನಿಮ್ಮ ದೇಶಕ್ಕೆ ವಾಪಸ್ ತೆಗೆದುಕೊಂಡು ಹೋಗಿ ಎಂದು ಭಾರತೀಯ ಸೇನೆ ಹೇಳಿದೆ. ಇದರ ಬಗ್ಗೆ ಪಾಕಿಸ್ತಾನಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಇಮ್ರಾನ್ ಖಾನ್ ಅವರು ಮಾಡಿರುವ ಟ್ವೀಟ್​ಗಳನ್ನು ಗಮನಿಸಿದರೆ ಅವರು ಕೇರನ್ ಸೆಕ್ಟರ್​ನಲ್ಲಿ ಹತರಾಗಿರುವ ಮಂದಿ ತಮ್ಮವರಲ್ಲ. ಬದಲಾಗಿ ಸ್ಥಳೀಯ ನಾಗರಿಕರು ಎಂದು ಪರೋಕ್ಷವಾಗಿ ತಿಳಿಸಿದಂತಿದೆ.

Comments are closed.