ಅಂತರಾಷ್ಟ್ರೀಯ

ನೋವನ್ನು ತಾಳಲಾರದೇ ತನ್ನ ಎರಡು ಕೈಗಳನ್ನು ಕತ್ತರಿಸಿಕೊಳ್ಳಲು ಮುಂದಾಗಿರುವ ‘ಮರದ ಮನುಷ್ಯ’ ಎಂದೇ ಕರೆಯಲ್ಪಡುವ ವ್ಯಕ್ತಿ

Pinterest LinkedIn Tumblr

ಢಾಕಾ: ದೇಹದಲ್ಲಿ ಮರದ ತೊಗಟೆ ರೀತಿಯಲ್ಲಿ ಚರ್ಮವು ಬೆಳೆಯುತ್ತಿರುವ ಕಾರಣದಿಂದಾಗಿ ‘ಮರದ ಮನುಷ್ಯ’ ಎಂದೇ ಕರೆಯಲಾಗಿರುವ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ತನಗಾಗುವ ನೋವನ್ನು ತಾಳಲಾರದೇ ತನ್ನ ಎರಡು ಕೈಗಳನ್ನು ಕತ್ತರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ಸೋಮವಾರ ತಿಳಿಸಿದ್ದಾನೆ.

ಅಬುಲ್​ ಬಜಂದರ್ ಎಂಬಾತ ವಿರಳಾತಿವಿರಳ ಕಾಯಿಲೆಯಿಂದ ಬಳಲುತ್ತಿದ್ದು, ತನ್ನ ಕಾಲು ಹಾಗೂ ಕೈಗಳಲ್ಲಿ ಬೆಳೆಯುತ್ತಿರುವ ಮರದ ತೊಗಟೆ ರೀತಿಯ ಚರ್ಮವನ್ನು ತೆಗೆಸಲು ಇದುವರೆಗೂ 25 ಬಾರಿ ಶಸ್ತ್ರಚಿಕಿತ್ಸಗೆ ಒಳಗಾಗಿದ್ದಾನೆ. ಆದರೂ ದೇಹದಲ್ಲಿ ಚರ್ಮ ಬೆಳೆಯುತ್ತಲೇ ಇದ್ದು, ಇದೀಗ ಸಾಕಷ್ಟು ನೋವುಂಟು ಮಾಡುತ್ತಿರುವುದಾಗಿ ಆತ ಅಳಲನ್ನು ತೋಡಿಕೊಂಡಿದ್ದಾನೆ.​

ಈ ಹಿಂದೆ ಆತನ ಕಾಯಿಲೆಯನ್ನು ಗುಣಪಡಿಸಿದ್ದೇವೆ ಎಂದು ಅಲ್ಲಿನ ಸ್ಥಳೀಯ ವೈದ್ಯರು ಬಲವಾಗಿ ನಂಬಿದ್ದರು. ಆದರೆ, ಮತ್ತೆ ಕಾಯಿಲೆ ಮರುಕಳಿಸಿದ್ದರಿಂದ ಕಳೆದ ವರ್ಷ ಮೇನಲ್ಲಿ ಢಾಕಾದ ಕ್ಲಿನಿಕ್​ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಜಂದರ್​ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಒಂದು ಮಗುವಿನ ತಂದೆಯಾಗಿರುವ 28 ವರ್ಷದ ಬಜಂದರ್ ತನ್ನ ಕಾಯಿಲೆ ಗಂಭೀರ ಸ್ಥಿತಿಗೆ ತಲುಪಿದಾಗ ಮತ್ತೆ ಜನವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಆಗಾಗಲೇ ದೇಹದಲ್ಲಿದ ಚರ್ಮದ ಭಾಗಗಳು ಸ್ವಲ್ಪ ಇಂಚು ಬೆಳೆದಿತ್ತು.

ಇದೀಗ ಮತ್ತೆ ನೋವು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಬಜಂದರ್​ ಇನ್ನು ಮುಂದೆ ನನ್ನ ಕೈಯಲ್ಲಿ ನೋವನ್ನು ತಡೆಯಲು ಆಗುವುದಿಲ್ಲ. ಇದರಿಂದಾಗಿ ರಾತ್ರಿ ನಿದ್ರೆ ಮಾಡಲು ಆಗುತ್ತಿಲ್ಲ. ಸ್ವಲ್ಪವಾದರೂ ನೋವು ನಿವಾರಣೆಯಾಗಲಿ ಎಂಬ ಕಾರಣಕ್ಕೆ ನನ್ನ ಎರಡು ಕೈಗಳನ್ನು ಕತ್ತರಿಸುವಂತೆ ವೈದ್ಯರಲ್ಲಿ ಮನವಿ ಮಾಡಿಕೊಂಡಿರುವುದಾಗಿ ಬಜಂದರ್​ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಬಜಂದರ್​ ತಾಯಿಯೂ ಕೂಡ ಮಗನ ಮನವಿಯನ್ನು ಬೆಂಬಲಿಸಿದ್ದು, ಮಗ ಹೇಳಿದಂತೆ ಆತನ ಕೈಗಳನ್ನು ಕತ್ತರಿಸಲಿ, ಇದರಿಂದ ಆತ ನೋವಿನಿಂದಾದರೂ ಮುಕ್ತವಾಗುತ್ತಾನೆ. ಹಾಗೇ ನರಕದ ಸ್ಥಿತಿಯಿಂದಾದರೂ ಪಾರಾಗುತ್ತಾನೆ ಎಂದು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದಾರೆ.

ಅಂದಹಾಗೆ ಬಜಂದರ್​ ‘ಎಪಿಡರ್ಮೊಡೈಸ್ಪ್ಲೇಸಿಯಾ ವೆರ್ರುಸಿಫಾರ್ಮಿಸ್’ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇದೊಂದು ವಿರಳವಾದ ಅನುವಂಶೀಯ ಸ್ಥಿತಿಯಾಗಿದ್ದು, ಇದನ್ನು ‘ಮರದ ಮನುಷ್ಯ ಕಾಯಿಲೆ’ ಎಂದೇ ಕರೆಯಲಾಗುತ್ತಿದೆ. ಅತ್ತ ಬಜಂದರ್​ಗೆ ವಿದೇಶಕ್ಕೆ ಹೋಗಿ ಉತ್ತಮ ಚಿಕಿತ್ಸೆ ಪಡೆಯುವ ಬಯಕೆಯಿದ್ದರೂ ಕೂಡ ಕಡು ಬಡತನ ಅವನ ಆಸೆಗೆ ಅಡ್ಡಗಾಲಾಗಿದೆ.

ಬಜಂದರ್​ ಮನವಿ ಬಗ್ಗೆ ಮಾತನಾಡಿರುವ ಢಾಕಾ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ಪ್ಲ್ಯಾಸ್ಟಿಕ್​ ಸರ್ಜನ್​ ಆಗಿರುವ ಸಮಂತಾ ಲಾಲ್​ ಸೇನ್​ ಏಳು ವೈದ್ಯ ಸದಸ್ಯರಿರುವ ಮಂಡಳಿಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಬಜಂದರ್​ ತನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಆದರೆ, ಆತನ ಕಾಯಿಲೆಗೆ ಇರುವ ಸೂಕ್ತ ಪರಿಹಾರವನ್ನು ಹುಡುಕಲು ನಮ್ಮ ಕಡೆಯಿಂದಾಗುವ ಉತ್ತಮ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ಜಜಂದರ್​ ಕಾಯಿಲೆ ದೇಶ-ವಿದೇಶಗಳಲ್ಲಿ ಚರ್ಚೆಯಾದ ಬೆನ್ನಲ್ಲೇ ಬಾಂಗ್ಲಾ ಪ್ರಧಾನಿ ಶೇಕ್​ ಹಸೀನಾ ಅವರು ಉಚಿತ ಶಸ್ತ್ರಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಜಂದರ್​ ಅವರು ತಮ್ಮ ಮೊದಲ ಸುತ್ತಿನ ಚಿಕಿತ್ಸೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಖಾಸಗಿ ಆಸ್ಪತ್ರೆಯಲ್ಲೇ ಕಳೆದಿದ್ದರು. ಅರ್ಧ ಡಜನ್​ಗಿಂತ ಕಡಿಮೆ ಮಂದಿ ವಿಶ್ವದಲ್ಲಿ ಈ ರೀತಿಯ ಕಾಯಿಲೆಗೆ ತುತ್ತಾಗುತ್ತಾರೆ ಎಂದು ನಂಬಲಾಗಿದೆ.

Comments are closed.