ರಾಷ್ಟ್ರೀಯ

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಉತ್ತರ ನೋಡಿ…

Pinterest LinkedIn Tumblr

ಹೊಸದಿಲ್ಲಿ: 17ನೇ ಲೋಕಸಭೆ ಮೊಟ್ಟ ಮೊದಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ನಂತರ ಎರಡನೇ ಬಾರಿಗೆ ಅಧಿಕಾರ ರಚಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಪರವಾಗಿ ಮೋದಿ ಉತ್ತರಿಸಿದರು.

ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ನಾವು ಮುಂದಾಗಿದ್ದೇವೆ. ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿರುವ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಜತೆಗೆ ಸದನದಲ್ಲಿರುವ ಎಲ್ಲ ಸಂಸದರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

ಕಳೆದ ಏಳು ದಶಕಗಳಲ್ಲಿ ಆಗಿರುವ ಸಮಸ್ಯೆಗಳನ್ನು ಕೇವಲ ಐದು ವರ್ಷದಲ್ಲಿ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ ಈ ನಿಟ್ಟಿನಲ್ಲಿ ನಮ್ಮ ದಿಟ್ಟ ಹೆಜ್ಜೆ ಸರಿಯಾಗಿ ಇಟ್ಟಿದ್ದೇವೆ. ಇದೇ ಕಾರಣಕ್ಕಾಗಿ ಜನರು ನಮಗೆ ಸಾಥ್‌ ನೀಡಿದ್ದಾರೆ. ಅತಿ ಹೆಚ್ಚು ಬೆಂಬಲ ನೀಡಿದ್ದಾರೆ ಎಂದರು.

2014ರಲ್ಲಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದಾಗ ನೀಡಿದ ವಾಗ್ದಾನದಂತೆ ಬಡವರ ಪರವಾಗಿಯೇ ನಾನು ಹಾಗೂ ನಮ್ಮ ಸರಕಾರ ಕೆಲಸ ಮಾಡಿದ್ದೇವೆ. ಯಂಗ್ ಇಂಡಿಯಾ ನಿರ್ಮಾಣವೇ ನಮ್ಮ ಗುರಿಯಾಗಿದೆ ಎಂದು ಮೋದಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರ ಕೈ ಜೋಡಿಸಿದರೆ ಮಾತ್ರ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಸಾಧ್ಯ. ಇದನ್ನು ಹೊಸದಿಲ್ಲಿಯ ಕೆಂಪುಕೋಟೆಯ ಮೇಲೆ ಎರಡು ಬಾರಿ, ಸದನದಲ್ಲಿಯೇ ಹಲವು ಬಾರಿ ತಿಳಿಸಿದ್ದೇನೆ ಎಂದರು.

ನೂತನ ಸಂಸದರು ಅತ್ಯುತ್ತಮವಾಗಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಮೋದಿ ತಿಳಿಸಿದರು.

ಜೂನ್‌ 25ರ ಮಧ್ಯರಾತ್ರಿ ನಮ್ಮ ಸಂವಿಧಾನದ ಆತ್ಮವನ್ನು ಹಿಡಿದಿಟ್ಟುಕೊಳ್ಳಲಾಗಿತ್ತು. ಮಾಧ್ಯಮದ ಕತ್ತು ಹಿಸುಕಲಾಗಿತ್ತು. ಇಡೀ ದೇಶವೇ ಜೈಲು ಎಂಬಂತಾಗಿತ್ತು. ಅದೊಂದು ಕರಾಳ ಅಧ್ಯಾಯ. ಇದಕ್ಕೆ ಕಾರಣರಾದವರ ಹೆಸರು ಇಂದಿಗೂ ಅಳಿಸಲು ಸಾಧ್ಯವಾಗಲಿಲ್ಲ ಎಂದರು.

ತುರ್ತು ಪರಿಸ್ಥಿತಿ ನಂತರ ಜನರು ಜಾತಿ, ಧರ್ಮವನ್ನು ಮೀರಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲು ಮತ ಚಲಾಯಿಸಿದರು ಎಂದು ಮೋದಿ ಸ್ಮರಿಸಿದರು.

Comments are closed.