ಅಂತರಾಷ್ಟ್ರೀಯ

ವಿಶ್ವಸಂಸ್ಥೆಯಿಂದ ಮಸೂದ್ ಅಜರ್ ಜಾಗತಿಕ ಉಗ್ರ ಎಂದು ಘೋಷಣೆ; ಪಾಕ್ ಗೆ ಮುಖಭಂಗ!

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಅನೇಕ ಭಯೋತ್ಪಾದನೆ ಚುಟವಟಿಕೆ ನಡೆಸಿದ ಆರೋಪ ಹೊತ್ತಿರುವ ಜೇಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್​ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಘೋಷಿಸಿದೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ನಿಷೇಧ ಸಮಿತಿಯ ಕಪ್ಪುಪಟ್ಟಿಗೆ ಮಸೂದ್ ಅಜರ್ ಸೇರಿದಂತಾಗುತ್ತದೆ. ಇದರೊಂದಿಗೆ ಭಾರತದ ಹಲವು ವರ್ಷಗಳ ಪ್ರಯತ್ನಕ್ಕೆ ಇವತ್ತು ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. ಇಷ್ಟು ವರ್ಷಗಳ ಭಾರತದ ಪ್ರಯತ್ನಕ್ಕೆ ತಡೆಯಾಗಿ ನಿಂತಿದ್ದ ಚೀನಾ ದೇಶ ತನ್ನ ನಿಲುವನ್ನು ಬದಲಿಸಿಕೊಂಡು ಮಸೂದ್​ಗೆ ಬೆಂಬಲ ನೀಡದಿರಲು ನಿರ್ಧರಿಸಿತು. ಹೀಗಾಗಿ, ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ನಿರ್ಣಯಕ್ಕೆ ಅಂಗೀಕಾರ ಸಿಕ್ಕಿತು.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ ವಿರುದ್ಧ ನಾಲ್ಕು ಬಾರಿ ನಿರ್ಣಯಗಳಾಗಿದ್ದವು. ಪ್ರತೀ ಬಾರಿಯೂ ಚೀನಾ ಕಲ್ಲು ಹಾಕುತ್ತಿತ್ತು. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 30ಕ್ಕೂ ಹೆಚ್ಚು ಸೈನಿಕರನ್ನು ಬಲಿತೆಗೆದುಕೊಂಡ ಘಟನೆ ನಡೆದ ಬಳಿಕ ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕ ದೇಶಗಳು ಮಸೂದ್ ಅಜರ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವವನ್ನು ಮತ್ತೊಮ್ಮೆ ಮುಂದಿಟ್ಟಿದ್ದವು. ಆಗಲೂ ಕೂಡ ಚೀನಾ ದೇಶ ತಾಂತ್ರಿಕ ಕಾರಣವೊಡ್ಡಿಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಿಲ್ಲ.

ಇತ್ತೀಚಿನ ದಿನಗಳಲ್ಲಿ ಚೀನಾದ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನ ಮಾಡಿತು. ಫ್ರಾನ್ಸ್ ಮತ್ತು ಅಮೆರಿಕ ದೇಶಗಳೂ ಚೀನಾ ಮೇಲೆ ಒತ್ತಡ ಹಾಕಿದವು. ಹೀಗಾಗಿ, ಚೀನಾ ತನ್ನ ಬಿಗಿನಿಲುವನ್ನ ಸಡಿಲಿಸಿತು.

ಮಸೂದ್ ಅಜರ್ ಅವರು ಭಯೋತ್ಪಾದನಾ ಕೃತ್ಯ ಎಸಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲವೆನ್ನುತ್ತಾ ಬಂದಿದ್ದ ಪಾಕಿಸ್ತಾನದ ನಿಲುವಿನಲ್ಲೂ ಇತ್ತೀಚೆಗೆ ತುಸು ಬದಲಾವಣೆಯಾಗಿದೆ. ಮಸೂದ್ ಅಜರ್ ಅವರನ್ನು ರಕ್ಷಿಸುವ ಉದ್ದೇಶ ತಮಗಿಲ್ಲ ಎಂದು ಪಾಕ್ ಹೇಳಿತ್ತು.

ಏನಿದು ವಿಶ್ವಸಂಸ್ಥೆ ಭದ್ರತಾ ಮಂಡಳಿ?

ವಿಶ್ವ ಸಂಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಭದ್ರತಾ ಮಂಡಳಿ(ಯುಎನ್​ಎಸ್​ಸಿ)ಯೂ ಒಂದು. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಪಾಲನೆಯ ಜವಾಬ್ದಾರಿ ಇದಕ್ಕಿದೆ. ವಿಶ್ವ ಸಂಸ್ಥೆಗೆ ಹೊಸ ಸದಸ್ಯ ರಾಷ್ಟ್ರಗಳನ್ನು ಸೇರಿಸಲು ಅಥವಾ ಅದರ ನಿಯಮಾವಳಿಯಲ್ಲಿ ಏನಾದರೂ ಬದಲಾವಣೆ ಮಾಡಲು ಈ ಮಂಡಳಿಯ ಅನುಮೋದನೆ ಅಗತ್ಯ. ಜಾಗತಿಕ ಶಾಂತಿ ಕಾರ್ಯಾಚರಣೆ, ಅಂತಾರಾಷ್ಟ್ರೀಯ ನಿಷೇಧಗಳು ಇತ್ಯಾದಿ ಕ್ರಮಗಳನ್ನ ಕೈಗೊಳ್ಳುವ ಅಧಿಕಾರ ಭದ್ರತಾ ಮಂಡಳಿಗಿದೆ.

ಈ ಮಂಡಳಿಯಲ್ಲಿ ಒಟ್ಟು 15 ಸದಸ್ಯ ರಾಷ್ಟ್ರಗಳಿರುತ್ತವೆ. ಅವುಗಳ ಪೈಕಿ ರಷ್ಯಾ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಈ ಐದು ರಾಷ್ಟ್ರಗಳು ಖಾಯಂ ಸದಸ್ಯತ್ವ ಹೊಂದಿವೆ. ಉಳಿದ 10 ಸದಸ್ಯರನ್ನು ಪ್ರಾದೇಶಿಕತೆ ಆಧಾರದ ಮೇಲೆ ಆವರ್ತನೆ ಮಾಡಲಾಗುತ್ತದೆ.

ಆದರೆ, ಯಾವುದೇ ಪ್ರಮುಖ ನಿರ್ಣಯ ಅಂಗೀಕಾರವಾಗಬೇಕಾದರೆ ಎಲ್ಲಾ ಐದು ಖಾಯಂ ಸದಸ್ಯರ ಅನುಮೋದನೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಮಸೂದ್ ಅಜರ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿರ್ಣಯಕ್ಕೆ ಚೀನಾದ ಒಪ್ಪಿಗೆ ಸಿಗುವವರೆಗೂ ಕಾಯಬೇಕಾಯಿತು.

ಈಗ ಮಸೂದ್ ಅಜರ್​ನನ್ನು ಉಗ್ರ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಆತನ ಮೇಲೆ ಅಂತಾರಾಷ್ಟ್ರೀಯ ನಿಷೇಧಗಳು ಚಾಲನೆಗೆ ಬರಲಿವೆ. ಅಂದರೆ, ಜೇಷ್-ಇ-ಮೊಹಮ್ಮದ್ ಸಂಘಟನೆಯ ಹಣಕಾಸು ಮೂಲದ ಬೇರುಗಳನ್ನು ಕತ್ತರಿಸಲು ಸಹಕಾರಿಯಾಗುತ್ತದೆ.

ನಿರ್ಣಯದ ಕಪ್ಪು ಪಟ್ಟಿಯಲ್ಲಿ ವ್ಯಕ್ತಿ ಅಥವಾ ಸಂಸ್ಥೆಯ ಹಣಕಾಸು ಆಸ್ತಿ ಅಥವಾ ಆರ್ಥಿಕ ಸಂಪನ್ಮೂಲಗಳನ್ನು ಎಲ್ಲಾ ದೇಶಗಳು ಮುಟ್ಟುಗೋಲು ಹಾಕಬೇಕು. ಈ ವ್ಯಕ್ತಿಗಳನ್ನ ಯಾವ ದೇಶ ಕೂಡ ಆಸರೆ ಒದಗಿಸುವಂತಿಲ್ಲ ಅಥವಾ ತಮ್ಮ ನೆಲವನ್ನು ಬಳಸಲು ಅವಕಾಶ ಮಾಡಿಕೊಡುವಂತಿಲ್ಲ. ಹೀಗೆ ಸಾಕಷ್ಟು ನಿಷೇಧ ಆಜ್ಞೆಗಳು ಚಾಲನೆಗೆ ಬರಲಿವೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಅಲ್​ಖೈದಾ ಸ್ಯಾಂಕ್ಷನ್ಸ್ ಕಮಿಟಿಯಲ್ಲಿ ಮಸೂದ್ ಅಜರ್​ನ ವಿರುದ್ಧ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಸಮಿತಿಯ ಕಪ್ಪುಪಟ್ಟಿಯಲ್ಲಿ ಇನ್ನೂ 8 ವ್ಯಕ್ತಿ ಮತ್ತು ಸಂಸ್ಥೆಗಳಿವೆ. ಇವರೆಲ್ಲರೂ ಇಸ್ಲಾಮಿಕ್ ಸ್ಟೇಟ್(ಐಎಸ್​ಐಎಲ್) ಅಥವಾ ಅಲ್-ಖೈದಾದ ಭಯೋತ್ಪಾದನಾ ಚಟುವಟಿಕೆಗಳಿಗೆ ನೇರ ಸಹಾಯವಾಗಿದ್ದಾರೆ. ಈಗ ಈ ಪಟ್ಟಿಗೆ ಅಜರ್ ಮಸೂದ್ ಸೇರ್ಪಡೆಯಾಗಿದ್ದಾನೆ.

1267 ಅಲ್​-ಖೈದಾ ಸ್ಯಾಂಕ್ಷನ್ಸ್ ಕಮಿಟಿಯ ಕಪ್ಪು ಪಟ್ಟಿಯಲ್ಲಿರುವವರು:

1) ಮುಹಮ್ಮದ್ ಬಹರುಮ್: ಈತ ಇಸ್ಲಾಮಿಕ್ ಸ್ಟೇಟ್(ISIL) ಅಥವಾ ಇರಾಕ್​ನ ಅಲ್-ಖೈದಾದ ಭಯೋತ್ಪಾದನಾ ಚಟುವಟಿಕೆಯಲ್ಲಿ ಶಾಮೀಲಾಗಿದ್ದ.

2) ಸಿರಿಯಾದಲ್ಲಿರುವ ಹನೀಫಾ ಹಣ ವಿನಿಮಯ ಕಚೇರಿ

3) ಸೆಲ್ಸೆಲಾತ್ ಅಲ್-ತಬಾಬ್

4) ಜೇಯಿಶ್ ಖಾಲಿದ್ ಇಬನ್ ಅಲ್ ವಾಲೀದ್

5) ಮಲಿಕ್ ರುಸ್ಲಾನೋವಿಚ್ ಬಾರ್ಖನೋಯೆವ್

6) ಮುರದ್ ಇರಾಕ್ಲೀವಿಚ್ ಮಾರ್ಗೋಶವ್ಲಿ

7) ಓಮನ್ ರೋಚ್​ಮನ್

8) ಜುಂದ್ ಅಲ್ ಅಕ್ಸಾ

Comments are closed.