ಅಂತರಾಷ್ಟ್ರೀಯ

ಟಿಕ್​ಟಾಕ್ ಆ್ಯಪ್ ಮೇಲಿನ ನಿಷೇಧ ತೆರವುಗೊಳಿಸಿದ ಮದ್ರಾಸ್​ ಹೈಕೋರ್ಟ್​

Pinterest LinkedIn Tumblr


ಟಿಕ್​ ಟಾಪ್​ ವಿಡಿಯೋ ಆ್ಯಪ್ ಮೇಲೆ ನಿಷೇಧ ಹೇರಿದ್ದ ನಿಷೇಧವನ್ನು ಮದ್ರಾಸ್​ ಹೈಕೋರ್ಟ್​ ಎಂದು ತೆರವುಗೊಳಿಸಿದೆ. ಇದೇ ತಿಂಗಳಲ್ಲಿ ಕೆಲವು ದಿನಗಳ ಮೊದಲು ಹೈಕೋರ್ಟ್​ ಈ ಚೈನೀಸ್​ ಮೊಬೈಲ್ ವಿಡಿಯೋ ಆ್ಯಪ್​ ಅನ್ನು ಬ್ಯಾನ್​ ಮಾಡಿತ್ತು. ಅಶ್ಲೀಲತೆಯನ್ನು ಉತ್ತೇಜಿಸುವ ಕಾರಣಕ್ಕೆ ಈ ಆ್ಯಪ್ ಅನ್ನು ಬ್ಯಾನ್​ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆ್ಯಪ್ ಸ್ಟೋರ್​ನಲ್ಲಿ ಟಿಕ್ ಟಾಕ್​ ಅನ್ನು ಏ. 18ರಿಂದ ಬ್ಯಾನ್​ ಮಾಡಲಾಗಿತ್ತು.

ಈ ಹಿಂದೆ ಟಿಕ್ ಟಾಕ್ ಆ್ಯಪ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಗೆ ಒಪ್ಪಿಸಿತ್ತು. ಅಲ್ಲದೆ ಇಂದು ಈ ಕುರಿತು ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ. ದೀಪಕ್ ಗುಪ್ತಾ, ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು. ಆದಷ್ಟು ಬೇಗ ಟಿಕ್​ ಟಾಕ್​ ಮೇಲಿನ ನಿಷೇಧದ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಸುಪ್ರೀಂಕೋರ್ಟ್ ಮದ್ರಾಸ್​ ಹೈಕೋರ್ಟ್​ಗೆ ಆದೇಶ ನೀಡಿದ ಎರಡೇ ದಿನಗಳಲ್ಲಿ ನಿಷೇಧವನ್ನು ತೆರವುಗೊಳಿಸಲಾಗಿದೆ. ​

ಪ್ರಕರಣದ ವಿಚಾರಣೆ ವೇಳೆ, ನಿಷೇಧ ಹೇರುವುದರಿಂದ ಎಲ್ಲ ಸಮಸ್ಯೆಯನ್ನೂ ಬಗೆಹರಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿ ಇರುವ ಹಕ್ಕುಗಳನ್ನು ರಕ್ಷಿಸುವುದು ಕೂಡ ನ್ಯಾಯಾಲಯದ ಜವಾಬ್ದಾರಿ ಎಂದು ವಾದ ಮಂಡಿಸಲಾಯಿತು. ಚೀನಾ ಮೂಲದ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧದಿಂದಾಗಿ ಮಾಲೀಕತ್ವ ಸಂಸ್ಥೆ ಬೈಟ್ ಡ್ಯಾನ್ಸ್ ಗೆ ಈ ವರೆಗೂ 4.5 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಟಿಕ್ ಟಾಕ್ ನಿಷೇಧ ಸಂಬಂಧ ಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಕುರಿತು ವಾದ ಮಂಡಿಸಿರುವ ಬೈಟ್ ಡ್ಯಾನ್ಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಆ್ಯಪ್ ನಿಷೇಧದ ಬಳಿಕ ಕೇವಲ ಬೈಟ್ ಡ್ಯಾನ್ಸ್ ಗೆ ಮಾತ್ರವಲ್ಲ, ಈ ಆ್ಯಪ್ ಬಳಕೆ ಮಾಡುತ್ತಿದ್ದ ಸುಮಾರು 2 ಮಿಲಿಯನ್ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಆ್ಯಪ್ ನ ಸುರಕ್ಷತೆ ಕುರಿತಂತೆ ಬೈಟ್ ಡ್ಯಾನ್ಸ್ ಸಂಸ್ಥೆ ಸಾಕಷ್ಟು ಹಣ ಸುರಿದಿದ್ದು, ಆ್ಯಪ್ ನಿಷೇಧದಿಂದಾಗಿ ಅದರ ಮಾಲೀಕತ್ವ ಸಂಸ್ಥೆ ಬೈಟ್ ಡ್ಯಾನ್ಸ್ ಗೆ 4.5 ಕೋಟಿ ರೂ ನಷ್ಟವಾಗಿದೆ ಎಂದು ವಾದ ಮಂಡಿಸಿದ್ದರು.

Comments are closed.