ಅಂತರಾಷ್ಟ್ರೀಯ

ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಿದರೆ ಮಾತ್ರ ಜಮ್ಮು- ಕಾಶ್ಮೀರದ ಶಾಂತಿ ಮಾತುಕತೆ ಸಾಧ್ಯ : ಇಮ್ರಾನ್ ಖಾನ್

Pinterest LinkedIn Tumblr

ಇಸ್ಲಮಾಬಾದ್: ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಿದರೆ ಜಮ್ಮು-ಕಾಶ್ಮೀರದ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಲಭ್ಯವಾಗಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಪತ್ರಕರ್ತರ ಸಂದರ್ಶನದಲ್ಲಿ ಮಾತನಾಡಿರುವ ಇಮ್ರಾನ್ ಖಾನ್, “ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಆ ಪಕ್ಷ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲು ಹಿಂದೇಟು ಹಾಕುತ್ತದೆ. ಆದರೆ, ಬಲಪಂಥೀಯ ಬೆಜೆಪಿ ಗೆಲುವು ಸಾಧಿಸಿದರೆ ಭಾಗಶಃ ಜಮ್ಮು-ಕಾಶ್ಮೀರ ವಿಷಯದಲ್ಲಿ ಮಾತುಕತೆಯ ಮೂಲಕ ಕೆಲವು ಪರಿಹಾರಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ” ಎಂದು ಖಾನ್ ತಿಳಿಸಿದ್ದಾರೆ.

ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ಮಾತನಾಡಿರುವ ಅವರು, “ಕಾಶ್ಮೀರದಲ್ಲಿನ ರಾಜತಾಂತ್ರಿಕ ಸಮಸ್ಯೆಗೆ ಮಿಲಿಟರಿ ಮೂಲಕ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲ. ಕಣಿವೆ ರಾಜ್ಯದ ಗಡಿ ಭಾಗಕ್ಕೆ ಪಾಕಿಸ್ತಾನದಿಂದ ಶಸ್ತ್ರ ಸಜ್ಜಿತ ಉಗ್ರರು ಪ್ರವೇಶಿಸುವಾಗ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿಯುವುದು ಸಾಮಾನ್ಯ. ಇಂತಹ ಮಿಲಿಟರಿ ಕಾರ್ಯಾಚರಣೆಗಳಿಂದಾಗಿ ಕಾಶ್ಮೀರಿಗಳು ಈಗಾಗಲೇ ಸಾಕಷ್ಟು ಕಠಿಣ ಸನ್ನಿವೇಶಗಳನ್ನು ಎದುರಿಸಿದ್ದಾರೆ ಹೀಗಾಗಿ ಶಸ್ತ್ರಗಳ ಮೂಲಕ ಕಾಶ್ಮೀರದ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ.

ಹೀಗಾಗಿ ಭಾರತ ಪಾಕಿಸ್ತಾನದ ಜೊತೆಗೆ ಶಾಂತಿ ಮಾತುಕತೆಗೆ ಬರುವುದಾದರೆ ಗಡಿ ಭಾಗದಲ್ಲಿ ಸಕ್ರೀಯರಾಗಿರುವ ಉಗ್ರಗಾಮಿ ಸಂಘಟನೆಗಳ ನಿರ್ಮೂಲನೆಗೆ ಪಾಕ್ ಸರಕಾರ ಸಿದ್ದವಾಗಿದೆ. ಇದಕ್ಕಾಗಿ ಪಾಕಿಸ್ತಾನದ ಸೇನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ಆಶ್ವಾಸನೆ ನೀಡಿದ್ದಾರೆ. ಅಲ್ಲದೆ, “ಪರಮಾಣು ಅಸ್ತ್ರಗಳನ್ನು ಹೊಂದಿರುವ ಎರಡು ಬೃಹತ್ ರಾಷ್ಟ್ರಗಳು ಒಟ್ಟಾಗಿ ಕಾಶ್ಮೀರದ ಸಮಸ್ಯೆ ಪರಿಹಾರ ಹುಡುಕಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಮೋದಿ ವಿರುದ್ಧ ಆರೋಪಗಳ ಸುರಿಮಳೆ : ಭಾರತದಲ್ಲಿನ ಮುಸ್ಲೀಮರ ಇಂದಿನ ಪರಿಸ್ಥಿತಿಯ ಕುರಿತು ಖೇದ ವ್ಯಕ್ತಪಡಿಸಿರುವ ಇಮ್ರಾನ್ ಖಾನ್, “ಭಾರತದಲ್ಲಿ ಮುಸ್ಲೀಮರು ಹಲವು ವರ್ಷಗಳಿಂದ ಸಂತಸದ ಜೀವನ ಸಾಗಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು ಮುಸ್ಲೀಮರು ಚಿಂತಾಕ್ರಾಂತರಾಗಿದ್ದಾರೆ ” ಎಂದು ವಿಷಾಧಿಸಿದ್ದಾರೆ.

ಒಂದೆಡೆ ಭಾರತದಲ್ಲಿ ಮುಸ್ಲೀಮರ ಸ್ಥಿತಿ ಚಿಂತಾಜನಕವಾಗಿದ್ದರೆ ಮತ್ತೊಂದೆಡೆ ಸೈನಿಕ ಕಾರ್ಯಾಚರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಸ್ರೇಲ್​ ದೇಶದ ಪ್ರಧಾನಿ ಬೆಂಜಮಿನ್ ನೇತನ್ಯಾಹು ರೀತಿಯಲ್ಲಿ ಭಯ ಮತ್ತು ರಾಷ್ಟ್ರೀಯತಾವಾದದ ಭಾವನೆಯನ್ನು ಆಧರಿಸಿ ಮೋದಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ನೇರವಾಗಿ ಆರೋಪಿಸಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಮೃತಪಟ್ಟಿರುವುದು ರಾಷ್ಟ್ರೀಯತೆಯ ಆಧಾರದಲ್ಲಿ ಮತ್ತೊಮ್ಮೆ ಬಿಜೆಪಿ ಪರ ಜನ ಭಾವನಾತ್ಮಕವಾಗಿ ಸ್ಪಂದಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಭಾರತ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮೂದ್ ಖುರೇಶಿ ಸಹ ಭಾನುವಾರ ಈ ಕುರಿತು ಮಾತನಾಡಿದ್ದು, “ಭಾರತ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ದಾಳಿ ನಡೆಸುವ ಕುರಿತು ಗೂಢಚಾರಿ ಇಲಾಖೆಯಿಂದ ಪಾಕಿಸ್ತಾನಕ್ಕೆ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಭಾರತದ ಮತ್ತೆ ಇಂತಹ ದಾಳಿ ಸಂಘಟಿಸಿದರೆ ಅದೊಂದು ಬೇಜವಾಬ್ದಾರಿ ನಡೆಯಾಗಲಿದೆ” ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Comments are closed.