ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಂದು ಜಂಟಿ ಸಂಸತ್ ಅಧಿವೇಶನದಲ್ಲಿ ಹೇಳಿದ್ದಾರೆ.
ಎರಡು ದೇಶಗಳ ನಡುವೆ ಶಾಂತಿ ಸಂಕೇತವಾಗಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿರುವ ಅವರು, ಪರಿಸ್ಥಿತಿ ಕೈ ಮೀರದಂತೆ ಎರಡು ದೇಶಗಳು ನೋಡಿಕೊಳ್ಳಬೇಕಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾಗಿ ಪಾಕಿಸ್ತಾನದ ಡಾನ್ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಬುಧವಾರ ಬೆಳಗ್ಗೆ ಪತನಗೊಂಡ ಭಾರತ ವಾಯುಪಡೆಯ ಮಿಗ್ -21 ಯುದ್ಧ ವಿಮಾನದ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಕೇಳಿಬಂದಿತ್ತು. ಅಲ್ಲದೇ, ಎರಡು ದೇಶಗಳ ನಡುವಿನ ಪ್ರಕ್ಷುಬ್ಧ ಪರಿಸ್ಥಿತಿ ತಹಬದಿಗೆ ಬಂದು ಶಾಂತಿ ಮಾತುಕತೆಯಾಗಲಿ ಎಂದು ಹಲವು ದೇಶಗಳು ಸಲಹೆ ನೀಡಿದ್ದವು.
ಬುಧವಾರ ಬೆಳಗ್ಗೆ ಪಾಕಿಸ್ತಾನದ ಜೆಟ್ ಎಫ್-16 ಯುದ್ಧವಿಮಾನ ಭಾರತ ವಾಯು ವಲಯ ಗಡಿಯನ್ನು ದಾಟಿದಾಗ ಭಾರತದ ಮಿಗ್-21 ವಿಮಾನವು ಅದನ್ನು ಹಿಮ್ಮೆಟ್ಟಿಸಿತ್ತು. ಈ ವೇಳೆ ಮಿಗ್-21 ವಿಮಾನ ಪತನಗೊಂಡಿತ್ತು. ವಿಮಾನದಿಂದ ಪ್ಯಾರಾಚೂಟ್ ಮೂಲಕ ಕೆಳಗಿಳಿದ ಅಭಿನಂದನ್ ಅವರನ್ನು ಪಾಕಿಸ್ತಾನ ಸೈನಿಕರು ಬಂಧಿಸಿದ್ದರು. ಅಭಿನಂದನ್ ಅವರ ಬಂಧನದ ನಂತರ ಎರಡು ದೇಶಗಳ ನಡುವಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿತ್ತು. ಅಭಿನಂದನ್ ಅವರನ್ನು ಸುರಕ್ಷಿತವಾಗಿ ಮತ್ತು ಆದಷ್ಟು ಬೇಗ ಭಾರತಕ್ಕೆ ವಾಪಸ್ ಕಳುಹಿಸುವಂತೆ ಭಾರತ ಪಾಕಿಸ್ತಾನಕ್ಕೆ ಆಗ್ರಹಿಸಿತ್ತು. ಈ ಸಂಬಂಧ ನೆನ್ನೆ ಪಾಕ್ ಹೈ ಕಮಿಷನರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
Comments are closed.