ಅಂತರಾಷ್ಟ್ರೀಯ

ಮಾತುಕತೆಗೆ ಮುಂದಾಗುವುದು ಒಳಿತು: ಇಮ್ರಾನ್ ಖಾನ್ ಮನವಿ

Pinterest LinkedIn Tumblr


ನವದೆಹಲಿ: ಕಾಶ್ಮೀರದ ಗಡಿಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣಗೊಂಡಿರುವಂತೆಯೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶಾಂತಿ ಮಾತುಕತೆಗೆ ಆಸಕ್ತಿ ತೋರಿದ್ದಾರೆ. ಯುದ್ಧದಿಂದ ಏನೂ ಸಾಧಿಸಲಾಗುವುದಿಲ್ಲ. ಎರಡೂ ದೇಶಗಳು ಅರ್ಥ ಮಾಡಿಕೊಂಡು ಮಾತುಕತೆಗೆ ಮುಂದಾಗಬೇಕು ಎಂದು ಇಮ್ರಾನ್ ಖಾನ್ ಸಲಹೆ ನೀಡಿದ್ದಾರೆ. ಇವತ್ತು ಇಸ್ಲಾಮಾಬಾದ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ, “ಮಾತುಕತೆಯ ಬಾಗಿಲು ತೆರೆದು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಬಂದಿದೆ,” ಎಂದು ಕರೆ ನೀಡಿದ್ಧಾರೆ.

“ಪುಲ್ವಾಮ ದಾಳಿಯ ತನಿಖೆಗೆ ಎಲ್ಲಾ ರೀತಿಯ ಬೆಂಬಲ ಒದಗಿಸುವುದಾಗಿ ಭಾರತಕ್ಕೆ ಭರವಸೆ ನೀಡಿದ್ದೆವು. ಭಯೋತ್ಪಾದನೆಯನ್ನು ಬೆಂಬಲಿಸುವುದರಿಂದ ಪಾಕಿಸ್ತಾನಕ್ಕೆ ಯಾವ ಲಾಭವೂ ಇಲ್ಲ. ಉಗ್ರರಿಗೆ ಆಶ್ರಯ ಒದಗಿಸುವುದರಿಂದಲೂ ಏನೂ ಲಾಭವಿಲ್ಲ. ಹಾಗೆಯೇ ಪಾಕಿಸ್ತಾನ ನೆಲದಲ್ಲೂ ಭಯೋತ್ಪಾದನೆ ಮಾಡಲು ಅವಕಾಶ ನೀಡುವುದಿಲ್ಲ,” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

“ಯಾವುದೇ ಸಾರ್ವಭೌಮ ರಾಷ್ಟ್ರವಾದರೂ ಬೇರೆಯವರಿಗೆ ತನ್ನ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕೊಡುವುದಿಲ್ಲ. ಭಾರತ ದಾಳಿ ನಡೆಸಿದರೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ನಾನು ಹೇಳಿದ್ದು ಇದೇ ಕಾರಣದಿಂದಲೇ” ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.

“ವಿಶ್ವದ ಇತಿಹಾಸದಲ್ಲಿ ಯಾವುದೇ ಯುದ್ಧವನ್ನೂ ತೆಗೆದುಕೊಂಡರೂ ಅದು ಲೆಕ್ಕಾಚಾರ ಕೈಕೊಟ್ಟಿರುವಂಥದ್ದೇ. ಯುದ್ಧ ಪ್ರಾರಂಭಿಸಿದವರಿಗೆ ಅದು ಹೇಗೆ ಅಂತ್ಯ ಆಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಗಮನಿಸಿದಾಗ ನಾವು ಲೆಕ್ಕಾಚಾರ ತಪ್ಪಿದರೆ ಉಳಿಗಾಲವುಂಟಾ ಎಂದು ಭಾರತವನ್ನು ಪ್ರಶ್ನೆ ಮಾಡುತ್ತೇನೆ” ಎಂದು ಪಾಕಿಸ್ತಾನ ಪ್ರಧಾನಿ ಎಚ್ಚರಿಸಿದ್ದಾರೆ.

“ಭಾರತದಿಂದ ಪ್ರಚೋದನೆ ಬಂದಾಗ ಪಾಕಿಸ್ತಾನವು ಎರಡು ಭಾರತೀಯ ಯುದ್ಧವಿಮಾನಗಳನ್ನು ಒಡೆದುರುಳಿಸಿತು. ಆದರೆ, ನಾವು ಯಾವುದೇ ವ್ಯಕ್ತಿ ಹಾಗೂ ಸೇನಾ ಪಡೆಗಳಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಿದವು. ನಮ್ಮನ್ನು ಪ್ರಚೋದಿಸಿದಾಗ ಸರಿಯಾಗಿ ತಿರುಗೇಟು ಕೊಡುವಷ್ಟು ಸಾಮರ್ಥ್ಯ ನಮ್ಮಲ್ಲಿದೆ ಎಂದು ನಾವು ತೋರಿಸಬೇಕಿತ್ತು ಅಷ್ಟೇ…. ನೀವು ನಮ್ಮ ದೇಶದೊಳಗೆ ಪ್ರವೇಶ ಮಾಡಿದಾಗ ನಾವೂ ಕೂಡ ನಿಮ್ಮ ಗಡಿಯೊಳಗೆ ಬರಬಲ್ಲೆವು. ಪಾಕಿಸ್ತಾನದ ವಾಯು ಪ್ರದೇಶದೊಳಗೆ ಬಂದ 2 ಮಿಗ್ ಯುದ್ಧವಿಮಾನಗಳನ್ನ ನಾವು ಕೆಳಗುರುಳಿಸಿದೆವು. ಆದರೆ, ಇಷ್ಟಾದ ನಂತರ ನಮ್ಮ ಮುಂದಿನ ದಾರಿಗಳೇನು? ನಾವು ಕುಳಿತು ಮಾತುಕತೆ ಮೂಲಕ ನಮ್ಮ ಭಿನ್ನಾಭಿಪ್ರಾಯಗಳಿಗೆ ಉತ್ತರ ಕಂಡುಕೊಳ್ಳಬೇಕು” ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

Comments are closed.