ಅಂತರಾಷ್ಟ್ರೀಯ

ನಮ್ಮದು ಅಂತಿಂಥ ಸೇನೆಯಲ್ಲ… ಕೆಣಕಿದರೆ ಹುಷಾರ್’ – ಭಾರತಕ್ಕೆ ಪಾಕ್ ಸೇನೆ

Pinterest LinkedIn Tumblr


ನವದೆಹಲಿ: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಇದೇ ವಿಚಾರ ಮುಂದಿಟ್ಟುಕೊಂಡು ಪಾಕಿಸ್ತಾನ ಮೇಲೆ ಸವಾರಿ ಮಾಡಲು ಬಂದರೆ ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನವು ಭಾರತಕ್ಕೆ ಎಚ್ಚರಿಕೆ ನೀಡಿದೆ. ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಕ್ ಸೇನೆಯ ಐಎಸ್​ಪಿಆರ್​ನ ಮಹಾನಿರ್ದೇಶಕ ಮೇಜರ್ ಜನರಲ್ ಅಸಿಫ್ ಗಫೂರ್, ಎಂಥದ್ದೇ ಬೆದರಿಕೆಗಳಿಗೂ ಪಾಕಿಸ್ತಾನ ಉತ್ತರ ಕೊಡಬಲ್ಲುದು. ನೀವು ನಮ್ಮೊಂದಿಗೆ ಆಟವಾಡಬೇಡಿ ಎಂದು ಕಠಿಣ ಪದಗಳಲ್ಲಿ ಭಾರತಕ್ಕೆ ವಾರ್ನಿಂಗ್ ನೀಡಿದರು.

ಪಾಕಿಸ್ತಾನದ ಸೇನೆ ಸಾಕಷ್ಟು ಯುದ್ಧಗಳನ್ನು ಮಾಡಿದ ಅನುಭವ ಹೊಂದಿದೆ. ಯಾವುದೇ ದಾಳಿಗೂ ಪ್ರತ್ಯುತ್ತರ ಕೊಡಬಲ್ಲಷ್ಟು ಸಮರ್ಥವಾಗಿದೆ. ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ಬರುವಂಥ ಸ್ಥಿತಿ ಇದ್ದರೆ ಅದಕ್ಕೆ ಹೋರಾಡಲು ಸೇನೆ ಸಿದ್ಧವಿದೆ ಎಂದು ಪಾಕ್ ಸೇನಾಧಿಕಾರಿ ಹೇಳಿದರು. ಆದರೆ, ಪಾಕಿಸ್ತಾನವು ಮೊದಲು ಯುದ್ಧ ಆರಂಭಿವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

“ಸಮರದ ಬೆದರಿಕೆ ಹಾಕುತ್ತಿರುವುದು ಭಾರತ. ನಮಗೆ ಯುದ್ಧ ಪ್ರಾರಂಭಿಸುವ ಇಚ್ಛೆ ಇಲ್ಲ. ಆದರೆ, ನಮ್ಮ ಮೇಲೆ ದಂಡೆತ್ತಿ ಬಂದರೆ ಉತ್ತರ ನೀಡದೇ ಇರುವುದಿಲ್ಲ,” ಎಂದು ಅಸಿಫ್ ಗಫೂರ್ ತಿಳಿಸಿದರು.

ಪಾಕಿಸ್ತಾನದ ವಿರುದ್ಧ ಭಾರತ ಸುಮ್ಮಸುಮ್ಮನೆ ಆಧಾರರಹಿತ ಆರೋಪಗಳನ್ನ ಮಾಡುತ್ತಾ ಬರುತ್ತಿದೆ. ಆದರೆ, 1998ರ ಪರಮಾಣು ಪರೀಕ್ಷೆಯ ನಂತರ ಪಾಕಿಸ್ತಾನ ನೆಲದಲ್ಲಿ ಭಾರತವೇ ಭಯೋತ್ಪಾದನೆ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿದೆ. ಇದಕ್ಕೆ ಕುಲಭೂಷಣ್ ಯಾದವ್ ಅವರೇ ಜೀವಂತ ಉದಾಹರಣೆಯಾಗಿದ್ಧಾರೆ ಎಂದು ಪಾಕ್ ಸೇನಾಧಿಕಾರಿಯು ಭಾರತದ ವಿರುದ್ಧ ಉಗ್ರ ಆರೋಪ ಮಾಡಿದರು.

ಇದನ್ನೂ ಓದಿ: ನೀರು ಬಿಡದಿದ್ದರೆ ನಮ್ಮದೇನೂ ವಿರೋಧವಿಲ್ಲ; ಭಾರತದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನ

“ಪಾಕಿಸ್ತಾನದಲ್ಲಿ ಏನಾದರೂ ಪ್ರಮುಖ ಘಟನೆ ಅಥವಾ ಬೆಳವಣಿಗೆಯಾಗುತ್ತಿರುವ ಹೊತ್ತಿನಲ್ಲೇ, ಅಥವಾ ದೇಶ ಸ್ಥಿರತೆಯತ್ತ ಸಾಗುತ್ತಿರುವ ಸಂದರ್ಭದಲ್ಲೇ ಪಾಕಿಸ್ತಾನದಲ್ಲೋ ಅಥವಾ ಕಾಶ್ಮೀರದಲ್ಲೋ ಒಂದು ಪೂರ್ವಯೋಜಿತ ಕೃತ್ಯ ನಡೆದಿರುತ್ತದೆ,” ಎಂದೂ ಅಸಿಫ್ ಗಫೂರ್ ಆಪಾದನೆ ಮಾಡಿದರು.

ಇದೇ ವೇಳೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೂ ಕೂಡ ಭಾರತವೇನಾದರೂ ಪಾಕ್ ತಂಟೆಗೆ ಬಂದರೆ ತಕ್ಕ ಉತ್ತರ ಕೊಡಬೇಕೆಂದು ತಮ್ಮ ಸೇನೆಗೆ ಸೂಚನೆ ರವಾನಿಸಿದ್ದಾರೆ. ಇನ್ನು, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಬಹುತೇಕ ಸದಸ್ಯ ರಾಷ್ಟ್ರಗಳು ಪುಲ್ವಾಮ ದಾಳಿ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕಟು ಎಚ್ಚರಿಕೆ ನೀಡಿದರೆ, ಚೀನಾ ಮಾತ್ರ ಪಾಕ್ ಪರವಾಗಿ ತಮ್ಮ ಅಚಲ ನಿಲುವನ್ನು ಮುಂದುವರಿಸಿದೆ.

Comments are closed.