ಅಂತರಾಷ್ಟ್ರೀಯ

ಪಾಕ್ ನಿಂದ ಮುಂಬೈ ದಾಳಿಯ ಸೂತ್ರಧಾರ ಹಫೀಜ್​ ಸಯೀದ್​ ನೇತೃತ್ವದ ಜಮಾತ್​-ಉದ್​-ದವಾ ಸಂಘಟನೆ ನಿಷೇಧ

Pinterest LinkedIn Tumblr


ಇಸ್ಲಾಮಾಬಾದ್​: 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್​ ಹಫೀಜ್​ ಸಯೀದ್​ ನೇತೃತ್ವದ ಜಮಾತ್​-ಉದ್​-ದವಾ ಮತ್ತು ಅದರ ಅಂಗಸಂಸ್ಥೆಯಾದ ಫಲ್ಹಾ-ಇ-ಇನ್​ಸಯಾತ್​ ಫೌಂಡೇಷನ್​ಅನ್ನು ಪಾಕಿಸ್ತಾನ ನಿಷೇಧ ಮಾಡಿದೆ. ಕಳೆದ ವಾರ ಉಗ್ರರು ಕಾಶ್ಮೀರದ ಪುಲ್ವಾಮ ಬಳಿ ದಾಳಿ ನಡೆಸಿ 40 ಸಿಆರ್​ಪಿಎಫ್​ ಯೋಧರನ್ನು ಕೊಂದ ಬಳಿಕ ಉಗ್ರ ಸಂಘಟನೆಗಳನ್ನು ದಮನ ಮಾಡುವಂತೆ ಜಾಗತಿಕವಾಗಿ ಒತ್ತಡ ಹೆಚ್ಚಾಗುತ್ತಿರುವ ನಡುವೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಆಂತರಿಕ ಸಚಿವಾಲಯದ ವಕ್ತಾರ ಮಾತನಾಡಿ, ಪ್ರಧಾನಿ ಇಮ್ರಾನ್​ ಖಾನ್​ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್​ಎಸ್​ಸಿ) ಸಭೆಯಲ್ಲಿ ಈ ಸಂಘಟನೆಗಳನ್ನು ನಿಷೇಧ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಮಾತ್​-ಉದ್​-ದವಾ ಹಾಗೂ ಫಲ್ಹಾ-ಇ-ಇನ್​ಸಯಾತ್ ಸಂಘಟನೆಗಳನ್ನು ನಿಷೇಧ ಮಾಡುವಂತೆ ಆಂತರಿಕ ಸಚಿವಾಲಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯದ ವಕ್ತಾರ ಸ್ಪಷ್ಟಪಡಿಸಿದ್ದಾರೆ.

ಮೂಲಗಳ ಪ್ರಕಾರ, ಜಮಾತ್​-ಉದ್​-ದವಾ ಸಂಘಟನೆ ಬಳಿ 300 ಪಾಠಶಾಲೆ ಸೇರಿದಂತೆ ಶಾಲೆಗಳು, ಆಸ್ಪತ್ರೆಗಳು, ಪಬ್ಲಿಷಿಂಗ್​ ಹೌಸ್​ ಮತ್ತು ಆ್ಯಂಬುಲೆನ್ಸ್​ ಸೇವೆಯನ್ನು ಹೊಂದಿದೆ. ಈ ಎರಡು ಗುಂಪುಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಹಾಗು ನೂರಕ್ಕೂ ಹೆಚ್ಚು ವೇತನ ಕೆಲಸಗಾರರು ಇದ್ದಾರೆ.

166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಜವಾಬ್ದಾರಿ ಹೊತ್ತ ಲಷ್ಕರ್​-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಮುಂಚೂಣಿ ಸಂಘಟನೆ ಜಮಾತ್-ಉದ್​-ದವಾ ಎಂದು ನಂಬಲಾಗಿದೆ. 2014ರಲ್ಲಿ ಈ ಸಂಘಟನೆಯನ್ನು ಅಮೆರಿಕ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು.

2012ರಿಂದ ಸಯೀದ್​ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್​ ಯುಎಸ್​ ಡಾಲರ್​ ಬಹುಮಾನವನ್ನು ಅಮೆರಿಕ ಹಣಕಾಸು ವಿಭಾಗ ಘೋಷಣೆ ಮಾಡಿದೆ.

ವಿಶ್ವಸಂಸ್ಥೆ ಭದ್ರತಾ ಸಮಿತಿ ಕೂಡ 2008ರ ಡಿಸೆಂಬರ್​ನಲ್ಲಿ ಸಯೀದ್​ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಿತ್ತು. 2017ರ ನವೆಂಬರ್​ನಲ್ಲಿ ಈತ ಪಾಕಿಸ್ತಾನದ ಗೃಹ ಬಂಧನದಿಂದ ಬಿಡುಗಡೆ ಮಾಡಿತ್ತು.

ಉಗ್ರಗಾಮಿತ್ವ ಮತ್ತು ತೀವ್ರಗಾಮಿತ್ವ ಸಮಾಜದಲ್ಲಿ ಬೇರೂರಿದೆ. ಇದನ್ನು ಕಿತ್ತೊಗೆಯಬೇಕಿದೆ. ಮತ್ತು ತೀವ್ರವಾದಿಗಳಿಗೆ ರಾಜ್ಯವು ಆಶ್ರಯ ಒದಗಿಸುವುದಿಲ್ಲ ಎಂದು ಇಮ್ರಾನ್​ ಖಾನ್​ ಹೇಳಿದ್ದಾರೆ. ಆಂತರಿಕ ಸಚಿವಾಲಯ ಮತ್ತು ಭದ್ರತಾ ಸಂಸ್ಥೆಗಳಿಗೆ ತಕ್ಷಣದಿಂದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

Comments are closed.