ಅಂತರಾಷ್ಟ್ರೀಯ

ಸೌದಿ ರಾಜಕುಮಾರನಿಗೆ ಪಾಕಿಸ್ತಾನ​ ಚಿನ್ನದ ಲೇಪನವಿರುವ ಬಂದೂಕನ್ನು ಕೊಟ್ಟಿದ್ಯಾಕೆ ?

Pinterest LinkedIn Tumblr

ಸಾಮಾನ್ಯವಾಗಿ ನಮ್ಮಲ್ಲಿಗೆ ಯಾರಾದರೂ ಅತಿಥಿಗಳು ಬಂದಾಗ ಅವರ ಮನಸಿಗೆ ಸಂತೋಷವಾಗುವಂತಹ ಆತಿಥ್ಯ ನೀಡಿ ಸತ್ಕರಿಸುತ್ತೇವೆ. ಇದು ದೇಶದ ವಿಚಾರದಲ್ಲೂ ಹೊರತಾಗಿಲ್ಲ. ನಮ್ಮ ದೇಶಕ್ಕೆ ಬೇರೆ ದೇಶದಿಂದ ಗಣ್ಯರು ಬಂದಾಗ ಅವರಿಗೆ ನಮ್ಮ ದೇಶದ ವಿಶೇಷವಾದ ಉಡುಗೊರೆಯನ್ನು ನೀಡಿ ಬೀಳ್ಕೊಡುವುದು ರೂಢಿ. ನೆರೆಯ ದೇಶ ಪಾಕಿಸ್ತಾನ ಕೂಡ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ. ಆದರೆ, ಮೊನ್ನೆಯಷ್ಟೇ ಅಲ್ಲಿಗೆ ಭೇಟಿ ನೀಡಿದ್ದ ಸೌದಿ ರಾಜಕುಮಾರನಿಗೆ ನೀಡಿರುವ ಉಡುಗೊರೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಪಾಕ್​ ನೀಡಿದ ಉಡುಗೊರೆಯಾದರೂ ಏನು ಅಂತೀರಾ?

ಸೌದಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಪಾಕಿಸ್ತಾನ ಮತ್ತು ಭಾರತಕ್ಕೆ ಭೇಟಿ ನೀಡಿದ್ದು ಗೊತ್ತೇ ಇದೆ. ಭಾರತಕ್ಕೆ ಬರುವ ಮೊದಲು ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಮೊಹಮದ್ ಬಿನ್ ಸಲ್ಮಾನ್​ ಅವರಿಗೆ ಪಾಕ್ ಉಡುಗೊರೆಯೊಂದನ್ನು ಕೊಟ್ಟು ಕಳುಹಿಸಿದೆ. ಚಿನ್ನದ ಲೇಪನವಿರುವ ಬಂದೂಕನ್ನು ಉಡುಗೊರೆಯಾಗಿ ಪಾಕ್​ ನೀಡಿದೆ.

ಹೆಕ್ಲರ್​ ಆ್ಯಂಡ್​ ಕೋಚ್​ ಎಂಪಿ5 ಎಂಬ ಸಬ್​ಮಷಿನ್ ಬಂದೂಕನ್ನು ಜರ್ಮನ್​ ಇಂಜಿನಿಯರ್​ಗಳು ತಯಾರಿಸಿದ್ದಾರೆ. ಈ ಬಂದೂಕನ್ನು ಚಿನ್ನದ ಲೇಪನದ ವಸ್ತುಗಳಿಂದ ತಯಾರಿಸಲಾಗಿದೆ. ಈ ನಡುವೆ ಪಾಕಿಸ್ತಾನದ ಶಾಸಕರು ಮತ್ತು ಸಂಸದರು ಕೂಡ ಸೌದಿ ರಾಜಕುಮಾರನ ಚಿತ್ರವಿರುವ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸೌದಿ ರಾಜಕುಮಾರನಿಗೆ ಬಂದೂಕನ್ನು ಉಡುಗೊರೆಯಾಗಿ ನೀಡಿರುವ ಪಾಕಿಸ್ತಾನದ ವರ್ತನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಭಯೋತ್ಪಾದಕ ರಾಷ್ಟ್ರವೆಂದು ಬಿಂಬಿತವಾಗುತ್ತಿರುವ ಪಾಕಿಸ್ತಾನ ತನ್ನ ಅತಿಥಿಗೆ ಚಿನ್ನದ ಬಂದೂಕನ್ನು ನೀಡಿರುವುದು ಬೇರೆ ದೇಶಿಗರ ಹುಬ್ಬೇರುವಂತೆ ಮಾಡಿದೆ.

ಮೊಹಮದ್ ಬಿನ್ ಸಲ್ಮಾನ್​ ಇಸ್ಲಮಾಬಾದ್​ಗೆ ಭೇಟಿ ನೀಡಿದ್ದಾಗ ಅದ್ದೂರಿ ಸ್ವಾಗತ ನೀಡಲಾಗಿತ್ತು. 21 ಗನ್ ಸಲ್ಯೂಟ್​ನೊಂದಿಗೆ ಸ್ವಾಗತ ಕೋರಲಾಗಿತ್ತು. ಈ ವೇಳೆ 20 ಬಿಲಿಯನ್ ಡಾಲರ್​ (1 ಲಕ್ಷದ 42 ಸಾವಿರ ಕೋಟಿ ರೂ.) ಮೌಲ್ಯದ ಒಪ್ಪಂದಕ್ಕೆ ಮೊಹಮದ್ ಬಿನ್ ಸಲ್ಮಾನ್​ ಸಹಿ ಹಾಕಿದ್ದರು. ನಿನ್ನೆ ಭಾರತಕ್ಕೆ ಬಂದಿದ್ದ ಸೌದಿ ರಾಜಕುಮಾರ ಇಲ್ಲಿಂದ ಚೀನಾಗೆ ಪ್ರಯಾಣ ಬೆಳೆಸಲಿದ್ದಾರೆ.

Comments are closed.