ಕರಾವಳಿ

ಇಂಗ್ಲಿಷ್ ಔಷಧಿಗಳಷ್ಟೇ ಪರಿಣಾಮಕಾರಿಯಾಗಿರುವ ಅಮೃತ ಬಳ್ಳಿಯ ವಿಶೇಷತೆ

Pinterest LinkedIn Tumblr

ಆರೋಗ್ಯದ ದೃಷ್ಟಿಯಿಂದ ನೋಡಿದರೆ ಭೂಮಿಯ ಮೇಲಿನ ಪ್ರತಿಯೊಂದು ಸಸ್ಯಗಳು ಒಂದಲ್ಲ ಒಂದು ರೀತಿಯಾಗಿ ಮಾನವನಿಗೆ ಬಹು ಉಪಯುಕ್ತ ಹಾಗೂ ವನಸ್ಪತಿಗಳೆಲ್ಲವೂ ರೋಗರುಜಿನಗಳಿಗೆ ಮದ್ದು. ಔಷಧಿ ರೂಪದಲ್ಲಿ ಉಪಯೋಗಿಸಲಾಗುತ್ತಿರುವ ಈ ವನಸ್ಪತಿಗಳಲ್ಲಿ ಅಮೃತ ಬಳ್ಳಿಯೂ ಒಂದು.

ಅಮೃತಬಳ್ಳಿಗೆ ಸಸ್ಯಶಾಸ್ತ್ರೀಯ ಭಾಷೆಯಲ್ಲಿ ಟೈನೋಸ್ಪೋರಾ ಕಾರ್ಡಿಫೋಲಿಯಾ ಎಂದು ಹೆಸರು. ಇದರ ಎಲೆಯು ಹೃದಯಾಕಾರದಲ್ಲಿರುವುದರಿಂದ ಇದಕ್ಕೆ ಕಾರ್ಡಿಪೋಲಿಯಾ ಎಂದು ಕರೆಯಲಾಗುತ್ತದೆ. ಮೆನಿಸ್ಪರ್ಮೇಸೀ ಎಂಬ ಸಸ್ಯ ಕಟುಂಬಕ್ಕೆ ಸೇರಿದ ಈ ಬಳ್ಳಿ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಎಲ್ಲ ರೀತಿಯ ವಾತಾವರಣದಲ್ಲಿಯೂ ಬೆಳಿಯುವಂಥದ್ದು. ಬಳ್ಳಿಯ ರೂಪದಲ್ಲಿ ಬೆಳೆಯುವ ಈ ಸಸ್ಯ ಬಹು ವಿಶಾಲವಾಗಿ ಹರಡಿಕೊಂಡಿರುತ್ತದೆ. ಮತ್ತು ಇದನ್ನು ಬೆಳೆಸುವ ವಿಧಾನವೂ ಅಷ್ಟೇನು ಕಷ್ಟವಲ್ಲ.

ಸಸ್ಯದ ಕಾಂಡವನ್ನು ಹದವಾದ ಮರಳು ಮಿಶ್ರಿತ ನೆಲದಲ್ಲಿಟ್ಟರೆ ಸುಲಭವಾಗಿ ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಹೀಗೆ ಸಾಮಾನ್ಯವಾಗಿ ಬೆಳೆಯುವ, ಕಾಣಸಿಗುವ ಅಮೃತ ಬಳ್ಳಿಯನ್ನು ಒಂದೊಂದು ಭಾಷೆಯಲ್ಲಿ ಒಂದೊಂದು ಹೆಸರಿನಿಂದ ಗುರುತಿಸಲಾಗುತ್ತ್ತಿದೆ. ಸಂಸ್ಕಂತದಲ್ಲಿ ಗುಡುಚಿ,ಮಧುಪುರಾನಿ, ಅಮ್ರಿತಾ, ಚಿನ್ನರುಹಾ, ತಾಂತ್ರಿಕಾ, ಕುಂಡಲಿನಿ, ಚಾಕ್ರಲಕ್ಷನಿಕಾ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಗುಡಚಿ, ಗಿಲೊಯಾ ಎಂದೂ ಬೆಂಗಾಲಿ ಭಾಷೆಯಲ್ಲಿ ಗುಲಾಚಾ ಅಥವಾ ಪಾಲೋ ಎಂದು ಕರೆಯುತ್ತಾರೆ.

ತೆಲಗುವಿನಲ್ಲಿ ಟಿಪ್ಪೆಟಿಗೂ ಮತ್ತು ಪಂಜಾಬಿನಲ್ಲಿ ಗಿಲೋ, ಮರಾಠಿಲಿ ಗುಲವೆಲ್ ಎಂದು ಹೆಸರಿಸಲಾಗಿದೆ. ಬಹುನಾಮಾಂಕಿತ ಈ ಅಮೃತ ಬಳ್ಳಿಯ ಕುರಿತಾಗಿ ಇತ್ತೀಚೆಗೆ ಅನೇಕ ಸಂಶೋಧನೆ, ಪ್ರಯೋಗಗಳು ನಡೆಯುತ್ತಲೇ ಇವೆ. ಆದರೆ ಈ ಬಳ್ಳಿಯ ಬಗ್ಗೆ ವೇದ ಕಾಲದ ಜನರಿಗೂ ಗೊತ್ತಿತ್ತು. ಚರಕ ಶುಶೃತರು ತಮ್ಮ ಚರಕ ಸಮ್ಮಿತ ಮತ್ತು ವೃಕ್ಷಾಯುರ್ವೇದ ಗ್ರಂಥಗಳಲ್ಲಿ ಇದರ ಮಹತ್ವವನ್ನು ಉಲ್ಲೇಖಿಸಿದ್ದಾರೆ.

ಆಯುರ್ವೇದ ಗುಣಾಂಶಗಳಿಂದಾಗಿ ಅಮೃತ ಬಳ್ಳಿ ಅನೇಕ ಕಾಯಿಲೆ ಕಸಾಲೆಗಳಿಗೆ ಸೂಕ್ತ ಮದ್ದು. ಶೀತ, ಜ್ವರ, ಮೈಕೈ ನೋವು, ವಾತ, ಅಧಿಕ ರಕ್ತದೊತ್ತಡ, ಕಾಮಾಲೆ, ರಕ್ತ ಹೀನತೆ, ಹೃದ್ರೋಗ, ಕಡಿಮೆ ಋತುಸ್ರಾವ, ಎದೆ ಹಾಲು ಹೆಚ್ಚಿಸಲು, ದಡಾರ, ಉಗುರು ಸುತ್ತು, ಅಲರ್ಜಿ, ಸುಟ್ಟ ಗಾಯ, ಗರ್ಭಿಣಿಯರ ನಂಜು, ಕೆಂಪು ಮುಟ್ಟು, ಸೌಂದರ್ಯ ವರ್ಧಕ, ಚರ್ಮರೋಗ, ಹೀಗೆ ನಮ್ಮ ದೇಹದ ಅಡಿಯಿಂದ ಮುಡಿಯವರೆಗೂ ಮತ್ತು ಎಲ್ಲ ವಯಸ್ಸಿನವರಿಗೂ ಈ ಬಳ್ಳಿಯನ್ನು ನಾನಾ ಕಾರಣಕ್ಕಾಗಿ ಉಪಯೋಗಿಸಲಾಗುತ್ತದೆ.

ಇದರ ಎಲೆ ಮತ್ತು ಕಾಂಡ ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿರುತ್ತವೆ. ಎಲೆಯನ್ನು ದಿನಕ್ಕೆ ಒಂದರಂತೆ ಸೇವಿಸಿದರೆ ಉತ್ತಮ. ಡಯಟ್ ಮಾಡುವವರು ಎಲೆಯನ್ನು ಪ್ರತಿದಿನ ತೆಗೆದುಕೊಂಡರೆ ಇನ್ನೂ ಪ್ರಯೋಜನಕಾರಿಯಾಗುತ್ತದೆ.

ಸಕ್ಕರೆ ಕಾಯಿಲೆ ಇರುವವರು ಅಮೃತ ಬಳ್ಳಿಯ ಎಲೆ, ಬೇವಿನ ಎಲೆ ಬಿಲ್ವ ಪತ್ರೆಗಳನ್ನು ಒಣಗಿಸಿ ಪುಡಿ ಮಾಡಿ ಪ್ರತಿ ದಿನ ಬೆಳಿಗ್ಗೆ ಒಂದು ಚಮಚ ನೀರಿನೊಂದಿಗೆ ಸೇವಿಸಿದರೆ ಆರೋಗ್ಯ ಒಂದು ಸುಧಾರಿಸುತ್ತದೆ. ಇನ್ನು ಕಾಂಡವೂ ಅಷ್ಟೆ. ಶೀತ ಜ್ವರ ಕೆಮ್ಮುಗಳಿಗೆ ಅದರ ಕಷಾಯ ರಾಮ ಬಾಣವಿದ್ದಂತೆ.

ವಿಷಜಂತುಗಳಾದ ಹಾವು ಚೇಳುಗಳು ಕಚ್ಚಿದ್ದಲ್ಲಿ ಕಾಂಡವನ್ನು ತೇಯ್ದು ಹಚ್ಚಿದರೆ ವಿಷ ಕಡಿಮೆಯಾಗುತ್ತದೆ. ಇದನ್ನು ಮನೆ ಮದ್ದಾಗಿ ಬಳಸಬಹುದು. ಕೇವಲ ಆರೋಗ್ಯ ದೃಷ್ಟಿಯಿಂದಷ್ಟೇ ಅಲ್ಲದೇ ಕಾಂಡದ ತುಂಡನ್ನು ಸದಾ ನಮ್ಮ ಜೇಬಿನಲ್ಲೋ ಅಥವಾ ನಮ್ಮ ಹತ್ತಿರವೇ ಇಟ್ಟುಕೊಂಡಲ್ಲಿ ಹಾವು ನಮ್ಮ ಬಳಿ ಸುಳಿಯುವುದಿಲ್ಲ ಎನ್ನುವ ನಂಬಿಕೆ ಇದೆ. ಏಕೆಂದರೆ ಹಾವು ಇದರ ವಾಸನೆಗೆ ತನ್ನ ಚುರುಕನ್ನು ಕಳೆದುಕೊಂಡು ಮೊಬ್ಬಾಗುತ್ತದೆ, ಕೂಡಲೇ ನಿಃಶಕ್ತಗೊಳ್ಳುತ್ತದೆಯಂತೆ.

ಇಷ್ಟೆಲ್ಲಾ ಔಷಧಿಗುಣಗಳನ್ನು ಹೊಂದಿರುವದಕ್ಕಾಗಿಯೇ ಈ ಬಳ್ಳಿಗೆ ಕನ್ನಡದಲ್ಲಿ ಅಮೃತ ಬಳ್ಳಿ ಎಂದು ಹೆಸರಿಸಲಾಗಿದೆ. ಇದು ಜೀವ ಕೊಡುವ ಅಮೃತವಿದ್ದಂತೆ ಎಂದು ಹೇಳಲಾಗುತ್ತದೆ. ಭಯಾನಕ ವೈರಸ್‍ಗಳಿಂದಾಗುವ ಭಯಾನಕ ರೋಗಗಳನ್ನು ಗುಣಪಡಿಸುವಲ್ಲಿ ಇಂಗ್ಲಿಷ್ ಔಷಧಿಗಳಷ್ಟೇ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತವೆ ಎನ್ನುತ್ತಾರೆ.

ಅಮೃತ ಬಳ್ಳಿಯ ಮತ್ತೊಂದು ವೈಶಿಷ್ಟ್ಯವೆಂದರೆ ಭಾನುವಾರ ಅಮವಾಸ್ಯೆ ಬಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಬಾಗಿಲಿಗೆ ಅಮೃತ ಬಳ್ಳಿಯ ತೋರಣ ಕಟ್ಟುತ್ತಾರೆ. ಭಾನುವಾರ ಅಮವಾಸ್ಯೆಯಂದು ಬರುವ ದುಷ್ಟಶಕ್ತಿಗಳನ್ನು ಉಚ್ಚಾಟನೆ ಮಾಡುವ ಶಕ್ತಿ ಈ ಅಮೃತ ಬಳ್ಳಿಗೆ ಇದೆ.

ಅಮೃತ ಬಳ್ಳಿಯನ್ನು ಕೇವಲ ಸಸ್ಯವಾಗಿ ನೋಡುವುದಷ್ಟೇ ಅಲ್ಲದೇ ಔಷಧಿ ಗುಣಗಳನ್ನು ಹೊಂದಿರುವ ವನಸ್ಪತಿಯಾಗಿಯೂ, ಮನೆ ಮದ್ದಾಗಿ, ಜೀವರಕ್ಷಕವಾಗಿಯೂ ನೋಡಿದರೆ ಅದೊಂದು ದೈವೀಕೃಪೆಯೇ ಸರಿ.

Comments are closed.