ಅಂತರಾಷ್ಟ್ರೀಯ

ಮಗುವಿಗೆ ಜನ್ಮ ನೀಡಿದ 14 ವರ್ಷಗಳಿಂದ ಕೋಮಾದಲ್ಲಿದ್ದ ಮಹಿಳೆ; ಗರ್ಭಿಣಿಗೆ ಆಸ್ಪತ್ರೆಯ ಸಿಬ್ಬಂದಿಯೇ ಕಾರಣ

Pinterest LinkedIn Tumblr

ಫೀನಿಕ್ಸ್​ : ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಆಕೆ ಸುಮಾರು 14 ವರ್ಷಗಳಿಂದ ಕೋಮಾದಲ್ಲಿದ್ದಳು. ಇತ್ತ ಎಲ್ಲರಂತೆ ಬದುಕಲೂ ಆಗದೆ, ಅತ್ತ ಸಾಯಲೂ ಆಗದೆ ಹಾಸಿಗೆಯ ಮೇಲೇ ದಶಕಗಳನ್ನು ಕಳೆದಿದ್ದಳು. ಆದರೆ, ಅದೇ ಮಹಿಳೆಗೆ ಡಿಸೆಂಬರ್​ 29ರಂದು ಗಂಡು ಮಗು ಹುಟ್ಟಿದೆ! ಇನ್ನೂ ವಿಚಿತ್ರವೆಂದರೆ ಕೋಮಾದಲ್ಲಿದ್ದ ಆಕೆಯನ್ನು ನೋಡಿಕೊಳ್ಳುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಗೂ ಆಕೆ ಗರ್ಭಿಣಿಯಾಗಿದ್ದಳು ಎಂಬ ವಿಷಯವೇ ಗೊತ್ತಿರಲಿಲ್ಲ. ಕೋಮಾ ಸ್ಥಿತಿಯಲ್ಲಿದ್ದ ಆಕೆಗೆ ಮಗುವಾಗಿರುವುದು ಈಗ ಅಮೆರಿಕದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಕೋಮಾಗೆ ಜಾರಿದ್ದ ಆಕೆಗಾಗಿಯೇ ಪ್ರತ್ಯೇಕ ಕೋಣೆಯನ್ನು ನಿಗದಿಪಡಿಸಲಾಗಿತ್ತು. ಅಲ್ಲಿಯೇ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಡಿಸೆಂಬರ್​ 29ರಂದು ಆಕೆ ಇದ್ದಕ್ಕಿದ್ದಂತೆ ಚೀರಾಡತೊಡಗಿದಳು. ಇದರ ಕಾರಣ ತಿಳಿಯದೆ ಕಂಗಾಲಾದ ಆಸ್ಪತ್ರೆಯ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಹೆರಿಗೆ ನೋವಿನಿಂದ ನರಳಲಾರಂಭಿಸಿದ ಆಕೆ ಆರೋಗ್ಯವಂತ ಗಂಡುಮಗುವಿಗೆ ಜನ್ಮ ನೀಡಿದಳು. ಇದನ್ನು ನೋಡಿ ಆಸ್ಪತ್ರೆಯ ಸಿಬ್ಬಂದಿಯೇ ದಿಗ್ಭ್ರಾಂತರಾದರು.

ಸದ್ಯಕ್ಕೆ ಈ ಬಗ್ಗೆ ಫೀನಿಕ್ಸ್​ ಪೊಲೀಸ್​ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಕೋಮಾ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯೇ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭ ಧರಿಸುವಂತೆ ಮಾಡಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಅಸಹಾಯಕಳಾಗಿ ಕೋಮಾದಲ್ಲಿದ್ದ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿರುವುದರಿಂದ ಆಕೆ ಗರ್ಭಿಣಿಯಾಗಿದ್ದಾಳೆ. ಆದರೆ, ಇದು ಅತ್ಯಂತ ಹೇಯಕೃತ್ಯವಾಗಿದ್ದು, ಆಸ್ಪತ್ರೆಯ ಸಿಬ್ಬಂದಿಯಲ್ಲದೆ ಬೇರಾರೂ ಬಂದು ಈ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಹಾಗೇ, ಮಗುವಿನ ತಂದೆ ಯಾರು? ಎಂಬ ಬಗ್ಗೆ ತಿಳಿಯಲು ಡಿಎನ್​ಎ ಪರೀಕ್ಷೆ ನಡೆಸಲು ಯೋಚಿಸುತ್ತಿದ್ದೇವೆ. ಇದೀಗ ಆ ರೋಗಿಗೆ ಸೂಕ್ತ ಭದ್ರತೆ ನೀಡಲಾಗಿದ್ದು, ಸತ್ಯ ಮುಚ್ಚುಹಾಕಲು ಯಾರಾದರೂ ಆಕೆಗೆ ಅಪಾಯ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Comments are closed.