ಅಂತರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶ, ಭುಗಿಲೆದ್ದ ಹಿಂಸಾಚಾರದ ಕುರಿತು ವಿಶ್ವಸಂಸ್ಥೆ ಹೇಳಿದ್ದೇನು?

Pinterest LinkedIn Tumblr

ವಿಶ್ವಸಂಸ್ಥೆ: ವಿಶ್ವ ವಿಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿರುವಂತೆಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟರ್ರೆಸ್ ಅವರು, ಶಬರಿಮಲೆ ವಿಚಾರದ ಕುರಿತು ಈಗಾಗಲೇ ಭಾರತದ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ಈ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. ಆದರೆ ಪ್ರತೀಯೊಬ್ಬರೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು ಎಂದು ಹೇಳುವ ಮೂಲಕ ಶಬರಿಮಲೆಗೆ ಮಹಿಳೆಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಂಬಲ ಸೂಚಿಸಿದ್ದಾರೆ.

‘ಈಗಾಗಲೇ ಶಬರಿಮಲೆ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದೆ. ಹೀಗಾಗಿ ನಾವು ಈ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ. ಆದರೆ ಯಾವುದೇ ರಾಜಕೀಯ ಪಕ್ಷವಿರಲಿ, ಅಥವಾ ನಾಗರೀಕರಿರಲಿ ದೇಶದ ಕಾನೂನನ್ನು ಗೌರವಿಸಬೇಕು. ವಿಶ್ವಸಂಸ್ಥೆ ಕೂಡ ಸಮಾನತೆಯನ್ನು ತನ್ನ ಮೂಲ ಅಜೆಂಡಾವಾಗಿ ಹೊಂದಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ವಿಶ್ವಸಂಸ್ಥೆ ಮುಖ್ಯಸ್ಥರ ವಕ್ತರಾ ಫರ್ಹಾನ್ ಹಕ್ ಅವರು, ಶಬರಿಮಲೆ ವಿವಾದದಿಂದಾಗಿ ಕೇರಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆದರೆ ಯಾರೇ ಆದರೂ ಕಾನೂನನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಅಂತೆಯೇ ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಭಾರತದ ಸರ್ವೋಚ್ಛ ನ್ಯಾಯಾಲಯವೇ ತೀರ್ಪು ನೀಡಿದೆ. ಹೀಗಿರುವಾಗಿ ಈ ಬಗ್ಗೆ ನಮ್ಮ ಪ್ರತಿಕ್ರಿಯೆ ಅನಾವಶ್ಯಕ ಎಂದು ಹೇಳಿದರು.

ಅಂತೆಯೇ ಇಸ್ಲಾಂ ಮತ್ತು ಕ್ಯಾಥೋಲಿಸಂ ನಲ್ಲೂ ಇರುವ ಆಚರಣೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಬರಿಮಲೆ ವಿಚಾರ ಮತ್ತು ಇದು ಬೇರೆ ಬೇರೆಯಾಗಿದ್ದು, ಯಾವುದೇ ವಿಚಾರವಾದರೂ ವಿಶ್ವಸಂಸ್ಥೆ ನಿಲುವು ಒಂದೇ ಅದು ಸಮಾನತೆ ಮತ್ತು ಮಾನವೀಯತೆ. ಯಾರೇ ಆದರೂ ಕಾನೂನಿನ ನಿಯಮ ಪಾಲಿಸಬೇಕು ಎಂದು ಫರ್ಹಾನ್ ಹಕ್ ಹೇಳಿದ್ದಾರೆ.

Comments are closed.