ಅಂತರಾಷ್ಟ್ರೀಯ

ಇಂಧನ ತೆರಿಗೆ ಏರಿಕೆ ಮತ್ತು ಜೀವನ ವೆಚ್ಚ ಏರಿಕೆ ಖಂಡಿಸಿ ಫ್ರಾನ್ಸ್ ಸರ್ಕಾರದ ವಿರುದ್ಧ ದಂಗೆ ಎದ್ದ ಜನರು; ತುರ್ತು ಪರಿಸ್ಥಿತಿ ಘೋಷಣೆ ಸಾಧ್ಯತೆ

Pinterest LinkedIn Tumblr


ಪ್ಯಾರಿಸ್: ಇಂಧನ ತೆರಿಗೆ ಏರಿಕೆ ಮತ್ತು ಜೀವನ ವೆಚ್ಚ ಏರಿಕೆ ಖಂಡಿಸಿ ಫ್ರಾನ್ಸ್​ನಲ್ಲಿ ಸರ್ಕಾರದ ವಿರುದ್ದ ಜನರು ದಂಗೆ ಎದ್ದಿದ್ದಾರೆ. ಆ ಮೂಲಕ ಕಳೆದ ಒಂದು ದಶಕದ ಅವಧಿಯಲ್ಲಿ ಫ್ರಾನ್ಸ್ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಏರುವ ಸಾಧ್ಯತೆ ಇದೆ. ದಂಗೆಯೆದ್ದಿರುವ ಪ್ರತಿಭಟನಾಕಾರರನ್ನು ಸರ್ಕಾರದ ವಕ್ತಾರ ಬೆಂಜಮಿನ್ ಗ್ರಿವೇಕ್ಸ್​ ಸಂಧಾನಕ್ಕೆ ಆಹ್ವಾನಿಸಿದ್ದಾರೆ. ಫ್ರಾನ್ಸ್​ ದಂಗೆಯಿಂದಾಗಿ ಈವರೆಗೂ 133 ಮಂದಿ ಗಾಯಗೊಂಡಿದ್ದಾರೆ.

ಯುವಕರ ತಂಡಗಳು, ಮುಖಕ್ಕೆ ಮಾಸ್ಕ್​ ಧರಿಸಿ, ದೊಣ್ಣೆ ಮತ್ತು ಕಬ್ಬಿಣದ ರಾಡ್​ಗಳನ್ನು ಹಿಡಿದು, ಪ್ಯಾರಿಸ್​ ಸೆಂಟ್ರಲ್​ನಲ್ಲಿ ಶನಿವಾರ ಗಲಭೆ ಎಬ್ಬಿಸಿದ್ದಾರೆ. ಹತ್ತಾರು ಕಾರುಗಳನ್ನು ಜಖಂಗೊಳಿಸಿ, ಹಲವು ಕಟ್ಟಡಗಳಿಗೆ ಬೆಂಕಿ ಇಟ್ಟಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ತೆಗೆದುಕೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ನಾವು ಚಿಂತಿಸುತ್ತೇವೆ ಎಂದು ಗ್ರಿವೇಕ್ಸ್​ ಹೇಳಿದ್ದಾರೆ.

ಇಂಧನ ತೆರಿಗೆ ಮತ್ತು ಜೀವನ ವೆಚ್ಚದ ವಿರುದ್ಧವಾಗಿ ಎರಡು ವಾರಗಳಲ್ಲಿ ದೇಶದಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ಇದನ್ನು ‘ಯಲ್ಲೋ ವೆಸ್ಟ್’​ ದಂಗೆ ಎಂದೇ ಕರೆಯಲಾಗಿದೆ. ಕ್ರಾಂತಿಯಿಂದಾಗಿ ಫ್ರಾನ್ಸ್​ನ ಎಲ್ಲ ವಾಹನಗಳಲ್ಲೂ ಫ್ಲೋರೋಸೆಂಟ್ ಜಾಕೆಟ್​ಗಳನ್ನು ಇರಿಸಿಕೊಂಡು ಓಡಾಡಲಾಗುತ್ತಿದೆ.

ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುಲ್​ ಮ್ಯಾಕ್ರನ್ ಅವರು ಪ್ರಧಾನಿ ಮತ್ತು ಒಳಾಡಳಿತ ಸಚಿವರೊಂದಿಗೆ ತುರ್ತು ಸಭೆ ಕರೆದಿದ್ದು, ದಂಗೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮತ್ತು ದಂಗೆ ಆರಂಭದ ಕುರಿತು, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ನವೆಂಬರ್ 17ರಂದು ಆರಂಭವಾದ ಪ್ರತಿಭಟನೆ ಸಾಮಾಜಿಕ ಮಾಧ್ಯಮಗಳ ಸಹಾಯದಿಂದ ದೇಶವ್ಯಾಪಿ ಹಬ್ಬಿತು. ದಂಗೆಯಿಂದ ಒಟ್ಟು 133 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನಾಕಾರರು ದೇಶದ ರಸ್ತೆಗಳನ್ನು ತಡೆಗಟ್ಟುವುದು ಮತ್ತು ಶಾಪಿಂಗ್​ ಮಾಲ್​ಗಳು, ಕಾರ್ಖಾನೆಗಳು ಮತ್ತು ಕೆಲವು ಇಂಧನ ಡಿಪೋಗಳ ಬಾಗಿಲನ್ನು ಮುಚ್ಚಿಸಿದ್ದಾರೆ.

ಉದ್ವಿಗ್ನ ಪ್ರತಿಭಟನಾಕಾರರ ಗುಂಪು ದೂರದಿಂದ ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಒಳಾಡಳಿತ ಸಚಿವ ಕ್ರಿಸ್ಟೋಫರ್ ಕ್ಯಾಸ್ಟನೀರ್ ಪ್ರತಿಭಟನೆಯಲ್ಲಿ ನಿರತರಾದ ಕೆಲವರನ್ನು ಬಂಧಿಸಲಾಗಿದೆ. ಗಲಭೆ ಸ್ಥಳದಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂಧನ ತೆರಿಗೆ ಏರಿಕೆ ಸಂಬಂಧ ಸರ್ಕಾರದಿಂದ ಕೆಲ ತಪ್ಪುಗಳಾಗಿರಬಹುದು. ಅದನ್ನು ಹೇಗೆ ಸರಿಪಡಿಸಬಹುದು ಎಂದು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ದಂಗೆಯ ಸಂಘಟನೆಯಲ್ಲಿರುವವರು ಸಂಧಾನಕ್ಕೆ ಬರಬೇಕು ಎಂದು ಸಚಿವ ಮತ್ತು ವಕ್ತಾರರು ಆಹ್ವಾನ ನೀಡಿದ್ದಾರೆ. ನಾವು ಅವರೊಂದಿಗೆ ಯಾವ ಸ್ಥಳದಲ್ಲಿ ಬೇಕಾದರೂ ಮಾತುಕತೆಗೆ ಸಿದ್ಧರಿದ್ದೇವೆ. ಅವರಿಗೆ ದ್ವಾರಗಳು ಮುಕ್ತವಾಗಿವೆ ಎಂದು ವಕ್ತಾರ ಗ್ರೇವೆಕ್ಸ್​ ಹೇಳಿದ್ದಾರೆ.

Comments are closed.