
ವೆಬ್ಸೈಟ್ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ಚೀನಾ ಸರ್ಕಾರ ಈಗ ಮತ್ತೊಂದು ಪ್ರಕಟಣೆಯನ್ನು ಹೊರಡಿಸಿದೆ. ಈ ಹಿಂದೆಯಿದ್ದ ಅಶ್ಲೀಲ ವಿಡಿಯೋ ಜಾಲತಾಣ ಮತ್ತು ಸರ್ಕಾರದ ವಿರುದ್ಧದ ಪ್ರಕಟಣೆ ಬಗ್ಗೆ ಮಾಹಿತಿ ಒದಗಿಸಿದರೆ ನೀಡುತ್ತಿದ್ದ ಬಹುಮಾನವನ್ನು ಮತ್ತಷ್ಟು ಹೆಚ್ಚಿಸಿರುವುದಾಗಿ ಸರ್ಕಾರ ತಿಳಿಸಿದೆ.
ಈ ಹಿಂದೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೆ ಚೀನಾ ಸರ್ಕಾರ 3 ಲಕ್ಷ ಯುವಾನ್( 31 ಲಕ್ಷ ರೂ) ಬಹುಮಾನವಾಗಿ ನೀಡುತ್ತಿದ್ದರು. ಆದರೆ ಡಿಸೆಂಬರ್ 1 ರಿಂದ ಈ ಮೊತ್ತವನ್ನು ದ್ವಿಗುಣಗೊಳಿಸುವುದಾಗಿ ತಿಳಿಸಿರುವ ಸರ್ಕಾರ, 6 ಲಕ್ಷ ಯುವಾನ್ (62 ಲಕ್ಷ ರೂ.) ಬಹುಮಾನ ಘೋಷಣೆ ಮಾಡಿದೆ.
ಇತ್ತೀಚೆಗಷ್ಟೇ ಚೀನಾದಲ್ಲಿ 4 ಸಾವಿರಕ್ಕೂ ಹೆಚ್ಚಿನ ಪೋರ್ನ್ ವೆಬ್ಸೈಟ್ಗಳನ್ನು ಬ್ಯಾನ್ ಮಾಡಲಾಗಿದ್ದು, ಆದರೂ ಅಲ್ಲಲ್ಲಿ ಕೆಲ ವೆಬ್ಸೈಟ್ಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಅಲ್ಲದೆ ಸರ್ಕಾರ ವಿರುದ್ಧ ಮತ್ತು ದೇಶಕ್ಕೆ ಮಾರಕವಾಗುವಂತಹ ಪ್ರಕಟಣೆಗಳನ್ನು ಸಾಮಾಜಿಕ ಜಾಲತಾಣ, ವೆಬ್ಸೈಟ್ಗಳಲ್ಲಿ ಪ್ರಕಟಿಸಲಾಗುತ್ತಿದ್ದು ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಬಹುಮಾನದ ಆಫರ್ಗಳನ್ನು ನೀಡಲಾಗಿದೆ ಎನ್ನಲಾಗಿದೆ.
ಚೀನಾ ಸೈಬರ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಸಿಎಸಿ) ಸೈಬರ್ ಸಂಸ್ಥೆ ಇತ್ತೀಚೆಗೆ ರಾಜಕೀಯ ವದಂತಿಗಳನ್ನು ಹರಡುತ್ತಿದ್ದ 9800 ಕ್ಕೂ ಅಧಿಕ ಸಾಮಾಜಿಕ ಖಾತೆಗಳನ್ನು ನಿಷ್ಕ್ರಿಯಗೊಳಿಸಿತ್ತು. ಅಲ್ಲದೆ ದೇಶಕ್ಕೆ ಹಾನಿಯಾಗುವಂತಹ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಈ ಹಿಂದೆ WeChat ಮತ್ತು Weibo ಆ್ಯಪ್ಗಳ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.
ದೇಶದ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿರುವ ಸಿಎಸಿ, 2012 ರಲ್ಲಿ ದೇಶದಲ್ಲಿ ನಕಲಿ ಹೆಸರಿನಲ್ಲಿ ಬ್ಲಾಗ್, ಚಾಟ್ ಗ್ರೂಪ್, ಟ್ವಿಟರ್ನಂತಹ ಖಾತೆಗಳನ್ನು ಹೊಂದುವುದು ಕಾನೂನು ಬಾಹಿರ ಎಂದು ಆದೇಶ ಹೊರಡಿಸಿತ್ತು. ಜನರ ಭದ್ರತೆ ಮತ್ತು ದೇಶದ ಹಿತಾಸಕ್ತಿಗಾಗಿ ಬಹುಮಾನದ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದೆ ಚೀನಾ ಸರ್ಕಾರ ಹೇಳಿಕೊಂಡಿದೆ.
Comments are closed.