ಅಂತರಾಷ್ಟ್ರೀಯ

ಇಡೀ ಹಳ್ಳಿಯನ್ನು ಮಾರಾಟಕ್ಕಿಟ್ಟ ಸರಕಾರ

Pinterest LinkedIn Tumblr


ನಮ್ಮ ದೇಶದಲ್ಲಿ ರಾಜಕಾರಣಿಗಳು ಅಥವಾ ಸೆಲೆಬ್ರೆಟಿಗಳು ಗ್ರಾಮಗಳನ್ನು ದತ್ತು ಪಡೆಯುವುದನ್ನು ಓದಿರುತ್ತೀರಿ. ಇಲ್ಲ ನಿರ್ದಿಷ್ಟ ನಿವೇಶನಗಳನ್ನು ಅಥವಾ ಭೂಮಿಯನ್ನು ಮಾರಾಟ ಮಾಡುವುದನ್ನು ನೋಡಿರುತ್ತೀರಿ. ಆದರೆ ಇಡೀ ಗ್ರಾಮವನ್ನೇ ಮಾರಾಟ ಮಾಡುತ್ತಿರುವುದು ಕೇಳಿದ್ದೀರಾ?. ಹೌದು, ನ್ಯೂಜಿಲ್ಯಾಂಡ್​ನ ಲೇಕ್ ವೈಟಕಿ ಎಂಬ ಗ್ರಾಮವನ್ನೇ ಮಾರಾಟಕ್ಕೆ ಇಡಲಾಗಿದೆ. ಕಳೆದ ಮೂರು ದಶಕಗಳಿಂದ ಖಾಲಿ ಬಿದ್ದಿರುವ ಈ ಗ್ರಾಮವನ್ನು ಮಾರಾಟ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇದಕ್ಕೆ ನಿಗದಿ ಪಡಿಸಿದ ಬೆಲೆ 2.8 ಮಿಲಿಯನ್ ಡಾಲರ್​. ಅಂದರೆ ಸುಮಾರು 20 ಕೋಟಿ 59 ಲಕ್ಷ. ಮಾತ್ರ.

ಲೇಕ್ ವೈಟಕಿ ಗ್ರಾಮವು ನ್ಯೂಜಿಲ್ಯಾಂಡ್​ನ ಡ್ಯುನೆಡಿನ್ ನಗರದಿಂದ 180 ಕಿ.ಮೀ ದೂರದಲ್ಲಿದೆ. ಈ ಗ್ರಾಮವು 1930ರಲ್ಲಿ ನೆಲೆಗೊಂಡಿದ್ದು, ಆ ವೇಳೆ ಇಲ್ಲಿ ಅಣೆಕಟ್ಟೊಂದನ್ನು ನಿರ್ಮಿಸಲಾಗಿತ್ತು. ಈ ವೇಳೆ ಕಾರ್ಮಿಕರೆಲ್ಲರೂ ಇದೇ ಗ್ರಾಮದಲ್ಲಿ ನೆಲೆಸಿದ್ದರು. ಆದರೆ 1980 ದಶಕ ಬರುತ್ತಿದ್ದಂತೆ ಗ್ರಾಮವು ನಿಧಾನಕ್ಕೆ ಖಾಲಿಯಾಯಿತು. ಗ್ರಾಮೀಣ ಜೀವನವನ್ನು ತೊರೆದ ಇಲ್ಲಿನವರು ನಗರಗಳಿಗೆ ವಲಸೆ ಹೋದರು.

ಸುಂದರ ಭೂ ಪ್ರದೇಶ ಹೊಂದಿರುವ ಲೇಕ್ ವೈಟಕಿಯಲ್ಲಿ ಒಟ್ಟು ಎಂಟು ಮನೆಗಳಿವೆ. ಅದಲ್ಲದೆ ಒಂದು ರೆಸ್ಟೋರೆಂಟ್, ವಸತಿ ಗೃಹ ಹಾಗೂ ಮಲ್ಟಿ ಕಾರ್ ಗ್ಯಾರೇಜ್ ಕೂಡ ಇಲ್ಲಿ ಸ್ಥಾಪಿಸಲಾಗಿದೆ. ಆದರೆ ಇದೆಲ್ಲವನ್ನು ತೊರೆದಿರುವ ಇಲ್ಲಿನ ಜನರು ಕಳೆದ 30 ವರ್ಷಗಳಿಂದ ಇತ್ತಕಡೆ ತಲೆ ಕೂಡ ಹಾಕಿಲ್ಲ ಎನ್ನಲಾಗಿದೆ.

ಹಾಗಾಗಿ ನ್ಯೂಜಿಲ್ಯಾಂಡ್​ನ ಏನ್​ ಏಜೆನ್ಸಿ ಈ ಭೂಮಿಯನ್ನು ಮಾರಾಟ ಮಾಡಿ ಪ್ರವಾಸೋದ್ಯವನ್ನು ಅಭಿವೃದ್ಧಿ ಪಡಿಸುವ ಇರಾದೆ ಹೊಂದಿದೆ. ಸರೋವರದ ದಡದಲ್ಲಿರುವ ಈ ಸುಂದರ ನಗರವನ್ನು ತಮ್ಮದಾಗಿಸಿಕೊಳ್ಳಲು ಹಲವು ವಿದೇಶಿ ಉದ್ಯಮಿಗಳು ಮುಂದಾಗಿದ್ದರು. ಆದರೆ ಕಿವೀಸ್​​ ದೇಶದ ಈ ಭೂಮಿಯನ್ನು ವಿದೇಶಿಯರಿಗೆ ಮಾರಾಟ ಮಾಡಲಾಗುವುದಿಲ್ಲ ಎಂದು ಅಲ್ಲಿನ ಸರ್ಕಾರ ಈಗಾಗಲೇ ಅಧಿ ಸೂಚನೆ ಹೊರಡಿಸಿದೆ.

Comments are closed.