ಅಂತರಾಷ್ಟ್ರೀಯ

ಅಪಹರಣಕ್ಕೆ ಬಂದ ಸಿರಿಸೇನಾ ಬೆಂಬಲಿಗರ ಮೇಲೆ ಸಚಿವ ಅರ್ಜುನ ರಣತುಂಗರ ಅಂಗರಕ್ಷಕರಿಂದ ಗುಂಡಿನ ದಾಳಿ; 1 ಸಾವು

Pinterest LinkedIn Tumblr


ಕೊಲಂಬೋ: ಕ್ಷಿಪ್ರ ರಾಜಕೀಯ ಕಾರ್ಯಾಚರಣೆಗಳನ್ನು ಕಾಣುತ್ತಿರುವ ಶ್ರೀಲಂಕಾದಲ್ಲಿ ಇಂದು ಗುಂಡಿನ ಸದ್ದು ಮೊಳಗಿದೆ. ಉಚ್ಚಾಟಿತ ಪ್ರಧಾನಿ ರಾನಿಲ್ ವಿಕ್ರಮಸಿಂಘ ಸಂಪುಟದಲ್ಲಿ ಸಚಿವರಾಗಿದ್ದ ಅರ್ಜುನ್ ರಣತುಂಗ ಅವರನ್ನು ಒತ್ತಾಗಿಸಲು ಬಂದ ಜನರ ಗುಂಪಿನ ಮೇಲೆ ಅವರ ಅಂಗರಕ್ಷಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಗುಂಡೇಟಿಗೆ ಒಬ್ಬ ಬಲಿಯಾಗಿದ್ದು, ಇನ್ನಿಬ್ಬರಿಗೆ ಗಾಯವಾಯಿತು ಎಂದು ಶ್ರೀಲಂಕಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಶುಕ್ರವಾರದಂದು ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ಉಚ್ಚಾಟಿಸಿ ಮಹಿಂದಾ ರಾಜಪಕ್ಸ ಅವರನ್ನು ಆ ಸ್ಥಾನಕ್ಕೆ ಕೂರಿಸುವ ಹಠಾತ್ ನಿರ್ಧಾರ ಕೈಗೊಂಡು ಸಂಚಲನ ಮೂಡಿಸಿದ್ದರು. ಆದರೆ, ವಿಕ್ರಮಸಿಂಘೆ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಒಪ್ಪಿಲ್ಲ. ಪ್ರಧಾನಿ ಕಚೇರಿಯನ್ನೂ ಬಿಟ್ಟು ಅವರು ಅಲುಗಾಡುತ್ತಿಲ್ಲ. ಬಹುಮತವಿಲ್ಲದೆಯೇ ಪ್ರಧಾನಿಯನ್ನು ಉಚ್ಚಾಟಿಸುವುದು ಸಂವಿಧಾನಬಾಹಿರ ಎಂಬುದು ಅವರ ವಾದ.

ಪ್ರಧಾನಿ ಕಚೇರಿಯನ್ನು ತೆರವು ಮಾಡುವಂತೆ ರಾನಿಲ್ ವಿಕ್ರಮಸಿಂಘೆ ಅವರಿಗೆ ಶನಿವಾರವೇ ಡೆಡ್​ಲೈನ್ ನೀಡಲಾಗಿತ್ತು. ಆದರೆ, ವಿಕ್ರಮಸಿಂಘೆ ತಮ್ಮ ಸ್ಥಳದಿಂದ ಕದಲದೆ ಪಟ್ಟುಹಿಡಿದುಕೊಂಡು ಕೂತಿದ್ದಾರೆ. ಅಲ್ಲದೇ, ತಮ್ಮ ಸಂಪುಟದಲ್ಲಿದ್ದ ಸಚಿವರು ಮತ್ತು ಮಿತ್ರ ಪಕ್ಷಗಳ ನಾಯಕರನ್ನ ಕರೆದು ಸಭೆ ನಡೆಸಿ ಸಂಸತ್​ನಲ್ಲಿ ತುರ್ತು ಅಧಿವೇಶನ ಕರೆದು ತಮ್ಮ ಬಹುಮತವನ್ನು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ವಿಕ್ರಮಸಿಂಘೆ ಜಗ್ಗುವ ಸೂಚನೆ ಕಾಣದ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿಗೆ ನೀಡಿದ್ದ ಭದ್ರತೆ ಮತ್ತು ಕಾರುಗಳ ಸೌಲಭ್ಯಗಳನ್ನು ಹಿಂದೆಗೆದುಕೊಂಡಿದ್ದಾರೆ. ವಿಕ್ರಮಸಿಂಘೆಯನ್ನು ಸ್ಥಳದಿಂದ ಕದಲಿಸಲು ಪೊಲೀಸರು ಕೋರ್ಟ್ ಆದೇಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಾಗೆಯೇ ತುರ್ತು ಅಧಿವೇಶನ ನಡೆಯುವ ಸಾಧ್ಯತೆ ಇರುವುದರಿಂದ ಅಧ್ಯಕ್ಷ ಸಿರಿಸೇನಾ ಅವರು ಮೂರು ವಾರಗಳ ಕಾಲ ಸಂಸತ್​ನ ಬಾಗಿಲು ಮುಚ್ಚಿಸಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ, ಅಧ್ಯಕ್ಷ ಸಿರಿಸೇನಾ ಅವರ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಪ್ರಧಾನಿ ಕಚೇರಿಯ ಬಳಿ ಜಮಾಯಿಸಿ, ಪೆಟ್ರೋಲಿಯಮ್ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಅವರನ್ನ ಒತ್ತೆಯಾಗಿರಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಈ ವೇಳೆ, ರಣತುಂಗ ಅವರ ಬಾಡಿಗಾರ್ಡ್​ಗಳು ಕೆಲ ಸುತ್ತುಗಳ ಗುಂಡಿನ ದಾಳಿ ಮಾಡಿ ಗುಂಪನ್ನು ಹಿಮ್ಮೆಟಿಸಿದ್ದಾರೆ. ಮೂವರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಂಡು ಹಾರಿಸಿದ ಅಂಗರಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಅಧ್ಯಕ್ಷರ ಸಮರ್ಥನೆ:
ರಾನಿಲ್ ವಿಕ್ರಮಸಿಂಘೆ ಅವರನ್ನ ಪ್ರಧಾನಿ ಸ್ಥಾನದಿಂದ ಪದಚ್ಯುತಿಗೊಳಿಸುವ ತಮ್ಮ ನಿರ್ಧಾರವನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿಯಾಗಿ ವಿಕ್ರಮಸಿಂಘೆ ಹದ್ದುಮೀರಿದ್ದರು. ಜನಸಾಮಾನ್ಯರ ಬವಣೆಗಳನ್ನ ಅರಿಯದೆ ತಮ್ಮ ಬಾಲಂಗೋಚಿಗಳಿಗೋಸ್ಕರವೇ ಸರಕಾರ ಇದೆ ಎಂದು ಭಾವಿಸಿದ್ದರು. ದಕ್ಷ ಆಡಳಿತವೆಂಬುದು ಕನಸಾಯಿತು. ಭ್ರಷ್ಟಾಚಾರ ಮೇರೆ ಮೀರಿತು. ಅವರನ್ನು ಕಿತ್ತೊಗೆಯುವುದು ಅನಿವಾರ್ಯವಾಗಿತ್ತು ಎಂದು ಸಿರಿಸೇನಾ ಹೇಳಿದ್ದಾರೆ.

ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರನ್ನು ಪ್ರಧಾನಿ ಸ್ಥಾನಕ್ಕೆ ಕೂರಿಸಿದ್ದು ಅಸಾಂವಿಧಾನಿಕ ಎಂಬ ಆರೋಪವನ್ನು ತಳ್ಳಿಹಾಕಿದ ಅಧ್ಯಕ್ಷ ಸಿರಿಸೇನಾ, ಸಂವಿಧಾನದ ಪ್ರಕಾರವೇ ನೂತನ ಪ್ರಧಾನಿಯನ್ನು ಆರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಸಿಂಹಳೀಯರ ನಾಡಿನಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಕುತೂಹಲದಿಂದ ವೀಕ್ಷಿಸುತ್ತಿವೆ. ಶ್ರೀಲಂಕಾದ ಸಂವಿಧಾನಕ್ಕೆ ಬದ್ಧವಾಗಿ ಎಲ್ಲಾ ರಾಜಕೀಯ ನಾಯಕರು ನಡೆದುಕೊಳ್ಳಬೇಕೆಂದು ಅನೇಕ ರಾಷ್ಟ್ರಗಳು ಲಂಕನ್ನರಿಗೆ ಮನವಿ ಮಾಡಿಕೊಂಡಿವೆ. ಚೀನಾ ದೇಶದೊಂದಿಗೆ ಶ್ರೀಲಂಕಾದ ಸಂಬಂಧ ಇತ್ತೀಚೆಗೆ ಗಾಢವಾಗುತ್ತಾ ಇರುವುದರಿಂದ ತನ್ನ ನೆರೆಯ ರಾಷ್ಟ್ರದಲ್ಲಿನ ಬೆಳವಣಿಗೆ ಭಾರತಕ್ಕೆ ಹೆಚ್ಚು ಮಹತ್ವದ್ದಾಗಿದೆ. ಮಹಿಂದ ರಾಜಪಕ್ಸ ಅವರು ಭಾರತದ ಪರ ಹೆಚ್ಚು ಸ್ನೇಹಪೂರ್ವಕವಾಗಿದ್ದಾರೆ.

Comments are closed.