ಅಂತರಾಷ್ಟ್ರೀಯ

48 ಸಿಬ್ಬಂದಿಗಳ ಮೇಲೆ #MeToo ಆರೋಪ: ಮನೆಗೆ ಕಳುಹಿಸಿದ ಗೂಗಲ್‍

Pinterest LinkedIn Tumblr

ವಾಷಿಂಗ್ಟನ್: ಮೀಟೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಶ್ವದ ಐಟಿ ದಿಗ್ಗಜ ಕಂಪನಿ ಗೂಗಲ್ ಕಳೆದ 2 ವರ್ಷಗಳಲ್ಲಿ 48 ಸಿಬ್ಬಂದಿಗೆ ಗೇಟ್ ಪಾಸ್ ನೀಡಿದೆ.

ಈ ಆರೋಪದಲ್ಲಿ 13 ಹಿರಿಯ ಅಧಿಕಾರಿಗಳು ಮತ್ತು 48 ಸಿಬ್ಬಂದಿ ಹೆಸರು ಕೇಳಿಬರುತ್ತಿದ್ದಂತೆ ಭಾರತೀಯ ಮೂಲದ ಗೂಗಲ್ ನ ಕಾರ್ಯನಿರ್ವಾಹಕ ಅಧಿಕಾರಿಯಾದ ಸುಂದರ್ ಪಿಚೈ ಅವರೆಲ್ಲರನ್ನು ಹೊರ ಹಾಕಿದ್ದಾರೆ.

ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಗೂಗಲ್ ನ ಆಂಡ್ರಾಯ್ಡ್ ಮುಖ್ಯಸ್ಥ ಆಂಡಿ ರೂಬಿನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಗೂಗಲ್ ಆಂಡಿ ರೂಬಿನ್ ಗೆ 9 ಕೋಟಿ ಡಾಲರ್(659 ಕೋಟಿ ರೂ.) ನಿರ್ಗಮನದ ಪ್ಯಾಕೇಜ್ ನೀಡಿ ಕೆಲಸದಿಂದ ತೆಗೆದು ಹಾಕಿತ್ತು. ಈ ಆರೋಪದಲ್ಲಿ ಆಂಡಿ ಮಾತ್ರವಲ್ಲದೇ 13 ಹಿರಿಯ ಅಧಿಕಾರಿಗಳ ಹೆಸರು ಕೇಳಿಬಂದಿದ್ದು, ಅವರನ್ನು ಸಹ ತಮ್ಮ ಕೆಲಸದಿಂದ ಹೊರಹಾಕಿದೆ ಎಂದು ಗೂಗಲ್ ವಕ್ತಾರರೊಬ್ಬರು ಮಾಧ್ಯಮವೊಂದಕ್ಕೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಗೂಗಲ್ ತನ್ನ ಉಪಾಧ್ಯಕ್ಷರು ಮತ್ತು ಹಿರಿಯ ಉಪಾಧ್ಯಕ್ಷರು ಕಂಪನಿಯ ಇತರೆ ಸಿಬ್ಬಂದಿಯ ಜೊತೆಗೆ ಯಾವುದೇ ಪ್ರೇಮ ಸಂಬಂಧವನ್ನ ಹೊಂದುವುದನ್ನು ನಿಷೇಧಿಸಿದೆ. ಈ ಕುರಿತಾಗಿ ವಿಶೇಷ ನೀತಿಯನ್ನು ಜಾರಿಗೆ ತರಲಾಗಿದೆ.

ಕಾರ್ಯಸ್ಥಳವನ್ನ ಸುರಕ್ಷಿತವಾಗಿ ನಿರ್ಮಾಣ ಮಾಡುವುದು ನಮ್ಮ ಗುರಿ, ಎರಡು ವರ್ಷದಲ್ಲಿ ನಮ್ಮ ಕಂಪನಿಯು ಅನೇಕ ಬದಲಾವಣೆಗಳನ್ನ ಮಾಡಿದೆ. ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಹ ಕೆಲಸಗಾರರಿಗೆ ಲೈಂಗಿಕ ಕಿರುಕುಳ ಅಥವಾ ದುರ್ವರ್ತನೆಗೆ ಸಂಬಂಧಿಸಿದ ಪ್ರತಿಯೊಂದು ದೂರನ್ನು ನಾವು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತೇವೆ ಎಂದು ಸುಂದರ್ ಪಿಚೈ ಇಮೇಲ್ ಮೂಲಕ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ.

Comments are closed.