ಅಂತರಾಷ್ಟ್ರೀಯ

ಪಾಕ್ ನಲ್ಲಿ ಇಮ್ರಾನ್ ಖಾನ್ ಹಣಿಯಲು ‘ಮಹಾಘಟ್ ಬಂಧನ್’; ರಾಜಕೀಯ ಬದ್ಧವೈರಿಗಳಿಂದ ವಿಪಕ್ಷಗಳ ಒಕ್ಕೂಟ ರಚನೆ

Pinterest LinkedIn Tumblr

ಇಸ್ಲಾಮಾಬಾದ್: ಮುಂಬರುವ ಲೋಕಸಭಾ ಚುನಾವಣೆಗೆ ವಿಪಕ್ಷಗಳೆಲ್ಲಾ ಒಗ್ಗೂಡಿ ಮಹಾಘಟ್ ಬಂಧನ್ ರಚನೆ ಮಾಡಿರುವ ರೀತಿಯಲ್ಲೇ ಪಾಕಿಸ್ತಾನದಲ್ಲೂ ರಾಜಕೀಯ ಬದ್ಧವೈರಿ ಪಕ್ಷಗಳೆಲ್ಲಾ ಸೇರಿ ವಿಪಕ್ಷಗಳ ಒಕ್ಕೂಟ ರಚನೆ ಮಾಡಲು ಮುಂದಾಗಿವೆ.

ಹೌದು.. ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮುಕ್ತಾಯದ ಬಳಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್, ಪಿಪಿಪಿ ಮತ್ತು ಎಂಎಂಎ ಪಕ್ಷಗಳೂ ಒಗ್ಗೂಡಿ ವಿಪಕ್ಷಗಳ ಒಕ್ಕೂಟ ರಚನೆ ಮಾಡಲು ಮುಂದಾಗಿವೆ.

ಈ ಹಿಂದೆ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸಂಸತ್ ಮತ್ತು ಪ್ರಾಂತೀಯ ಚುನಾವಣೆಯನ್ನು ವಿಸರ್ಜನೆ ಮಾಡಲು ಮುಂಜಾಗಿದ್ದವು. ಆದರೆ ಇದೀಗ ತಮ್ಮ ನಿಲುವು ಬದಲಿಸಿದ್ದು, ಪಾಕಿಸ್ತಾನ ಸೇನೆ ಬೆಂಬಲಿತ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷಕ್ಕೆ ತಿರುಗೇಟು ನೀಡಲು ವಿಪಕ್ಷಗಳ ಒಕ್ಕೂಟ ರಚನೆ ಮಾಡುತ್ತಿವೆ.

ಈಗಾಗಲೇ ಈ ಸಂಬಂಧ ಒಂದು ಸುತ್ತಿನ ಮಾತುಕತೆ ಮುಕ್ತಾಯವಾಗಿದ್ದು, ಪಾಕಿಸ್ತಾನ ಮಾಜಿ ಪ್ರಧಾನಿಗಳಾದ ಯೂಸುಫ್ ರಾಜಾ ಗಿಲಾನಿ, ರಾಜಾ ಫರ್ವೇಜ್ ಅಶ್ರಫ್, ಶಾಹೀದ್ ಖಕಾನ್ ಅಬ್ಬಾಸಿ, ಪಿಎಂಎಲ್ ಎನ್ ಅಧ್ಯಕ್ಷ ರಾಜಾ ಝಫರುಲ್ ಹಕ್, ಅವಾಮಿ ನ್ಯಾಷನಲ್ ಪಕ್ಷದ ಗುಲಾಂ ಅಹ್ಮದ್ ಬಿಲೌರ್, ಎಂಎಂಎ ಮುಖಂಡ ಮೌಲಾನ ಫಜ್ಲುರ್ ರೆಹ್ಮಾನ್ ಮತ್ತಿತರೆ ನಾಯಕರು ಪಾಲ್ಗೊಂಡಿದ್ದರು. ಒಕ್ಕೀೂಟ ರಚನೆ ಸಂಬಂಧ ಅಧಿಕೃತ ಘೋಷಣೆ ಬಾಕಿಯೊಂದೇ ಉಳಿದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಸಂಸತ್ ಮತ್ತು ಪ್ರಾಂತೀಯ ಚುನಾವಣೆ ವಿಸರ್ಜನೆ ಮಾಡದೇ ಇಮ್ರಾನ್ ಖಾನ್ ಸರ್ಕಾರವನ್ನು ಹಣಿಯಲು ವಿಪಕ್ಷಗಳು ಯೋಜನೆ ರೂಪಿಸಿವೆ.

Comments are closed.