ಅಂತರಾಷ್ಟ್ರೀಯ

ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಕೊಂದಿದ್ದಕ್ಕಾಗಿ 300 ಮೊಸಳೆಗಳನ್ನು ಕೊಂದ ಉದ್ರಿಕ್ತರ ಗುಂಪು

Pinterest LinkedIn Tumblr

ಸೊರೋಂಗ್​ (ಇಂಡೋನೇಷ್ಯಾ): ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ಕೊಂದಿದ್ದಕ್ಕಾಗಿ ಉದ್ರಿಕ್ತರ ಗುಂಪು ಸುಮಾರು 300 ಮೊಸಳೆಗಳನ್ನು ಕತ್ತರಿಸಿ ಕೊಂದಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಶನಿವಾರ ಮೊಸಳೆ ಸಂವರ್ಧನ ಕೇಂದ್ರದ ಬಳಿ 48 ವರ್ಷದ ಸುಗಿತೋ ಎಂಬ ವ್ಯಕ್ತಿ ಹುಲ್ಲು ತರಲು ತೆರಳಿದ್ದ. ಈ ಸಂದರ್ಭದಲ್ಲಿ ಆತನ ಮೇಲೆ ಮೊಸಳೆ ದಾಳಿ ಮಾಡಿತ್ತು. ಮೊಸಳೆ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದರು. ಇದನ್ನು ಖಂಡಿಸಿ ಸುಗಿತೋ ಸಂಬಂಧಿಕರು ಮತ್ತು ಸ್ಥಳೀಯರು ಸ್ಥಳೀಯ ಪೊಲೀಸ್​ ಠಾಣೆಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮೊಸಳೆ ಸಂವರ್ಧನ ಕೇಂದ್ರದ ಅಧಿಕಾರಿಗಳು ಪರಿಹಾರ ನೀಡುವುದಾಗಿ ತಿಳಿಸಿದ್ದರು.

ಆದರೆ ಇದನ್ನು ಒಪ್ಪದ ಸುಮಾರು 100 ಕ್ಕೂ ಹೆಚ್ಚಿನ ಜನರಿದ್ದ ಗುಂಪು ಕತ್ತಿ ಮತ್ತು ಇತರ ಮಾರಕಾಸ್ತ್ರಗಳೊಂದಿಗೆ ಮೊಸಳೆ ಸಂವರ್ಧನಾ ಕೇಂದ್ರದ ಮೇಲೆ ದಾಳಿ ನಡೆಸಿ ಒಟ್ಟು 292 ಮೊಸಳೆಗಳನ್ನು ಕತ್ತರಿಸಿ ಹಾಕಿದ್ದಾರೆ. ಉದ್ರಿಕ್ತರ ದಾಳಿಯಲ್ಲಿ 4 ಇಂಚು ಉದ್ದದ ಮರಿಗಳಿಂದ 2 ಮೀಟರ್​ ಉದ್ದದ ದೊಡ್ಡ ಮೊಸಳೆಗಳು ಮೃತಪಟ್ಟಿವೆ ಎಂದು ಮೊಸಳೆ ಸಂವರ್ಧನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.