
ಟೊಕಿಯೊ: ಜಪಾನ್ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದೆ. ರಾಜಧಾನಿ ಟೊಕಿಯೋ ಸೇರಿದಂತೆ ಹಲವೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಈವರೆಗೂ ಸುಮಾರು 195 ಜನರು ಸಾವನ್ನಪ್ಪಿದ್ದಾರೆ.
ಪ್ರವಾಹದಿಂದಾಗಿ ಇಬ್ಬರು ನಾಪತ್ತೆಯಾಗಿರುವುದು ದೃಢಪಟ್ಟಿದ್ದು, 42 ಜನರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಜಪಾನಿನ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಸುಗಾ ತಿಳಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಮಳೆಯಿಂದಾ ಹಾನಿಗೀಡಾಗಿರುವ ಒಕಾಯಾಮಾ ಪ್ರದೇಶಕ್ಕೆ ಜಪಾನ್ ಪ್ರಧಾನಿ ಶಿಂಜೊ ಅಬೆ ನಿನ್ನೆ ಭೇಟಿ ನೀಡಿ, ಹಾನಿ ಕುರಿತು ಹೆಲಿಕಾಪ್ಟರ್ ಮೂಲಕ ಸರ್ವೇ ನಡೆಸಿದರು. ಭಾರೀ ಮಳೆಯಿಂದಾಗಿ ಸಾಕಷ್ಟು ಪ್ರಮಾಣದ ಹಾನಿಯಾಗಿರುವುದಾಗಿ ಅವರು ಹೇಳಿದ್ದಾರೆ.
ಮಳೆಯಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ಒದಗಿಸಿರುವ ಪರಿಹಾರ ಕೇಂದ್ರಕ್ಕೂ ಅವರು ಭೇಟಿ ನೀಡಿದ್ದು, ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಕುರಾಶಿಕಾಗೂ ಅವರು ಭೇಟಿ ನೀಡಿದ್ದು, ಒಕಾಯಾಮಾ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ್ದಾರೆ.
ಕಳೆದ ಗುರುವಾರ ಆರಂಭವಾದ ಮಳೆ ಇನ್ನೂ ಮುಂದುವರೆದಿದೆ. ಜಪಾನಿನ ಕೆಲವು ಕಡೆಗಳಲ್ಲಿ 300 ರಿಂದ 500 ಮಿಲಿ ಮೀಟರ್ ಮಳೆಯಾಗಿದೆ. ಮಳೆಯಿಂದಾಗಿ ಹಿರೋಶಿಮಾ, ಒಕಾಯಾಮಾ, ಹ್ಯೊಗೊ ಮೊದಲಾದ ಕಡೆಗಳಲ್ಲಿ ಭಾರೀ ಹಾನಿಯಾಗಿದೆ. ಕೆಲವು ನಗರಗಳು ಸಂಪೂರ್ಣ ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 17 ಸಾವಿರ ಮನೆಗಳಿಗೆ ವಿದ್ಯುತ್ ಇಲ್ಲದಂತಾಗಿದ್ದು, ದೂರವಾಣಿ ಸಂಪರ್ಕಗಳು ಸ್ಥಗಿತಗೊಂಡಿವೆ. ಶೋಧ ಕಾರ್ಯಾಚರಣೆಗಾಗಿ ಸುಮಾರು ಸಾವಿರಾರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Comments are closed.