ಅಂತರಾಷ್ಟ್ರೀಯ

ಚೀನ ಹೊಟೇಲ್‌ ಕೋಣೆಯಲ್ಲಿ ಕಳ್ಳ ವಿಡಿಯೋ ಕ್ಯಾಮೆರಾ: ಆರೋಪಿ ಸೆರೆ

Pinterest LinkedIn Tumblr


ಬೀಜಿಂಗ್‌ : ಹೊಟೇಲ್‌ ರೂಮ್‌ ಪಡೆಯುವ ಯುವ ಜೋಡಿಗಳು ತಾವು ಉಳಿದುಕೊಳ್ಳುವ ಕೊಠಡಿಯಲ್ಲಿ ಕಳ್ಳ ವಿಡಿಯೋ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳದೇ ಹೋದಲ್ಲಿ ತಮ್ಮ ಸೆಕ್ಸ್‌ ಖಾಸಗೀತನ ಹರಾಜಾಗುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಚೀನದ ಒಂದು ಉದಾಹರಣೆ ಈಗ ಎದುರಾಗಿದೆ.

ಚೀನದ ಸಿಚುವಾನ್‌ ಪ್ರಾಂತ್ಯದಲ್ಲಿನ ಐಶಾರಾಮಿ ಹೊಟೇಲ್‌ ಒಂದರಲ್ಲಿ ಈ ವರ್ಷ ಮಾರ್ಚ್‌ ತಿಂಗಳಲ್ಲಿ ಚೀನೀ ವ್ಯಕ್ತಿಯೋರ್ವ ಎರಡು ಕೋಣೆಗಳನ್ನು ಬಾಡಿಗೆಗೆ ಪಡೆದಿದ್ದ; ಯಾರಿಗೂ ಗೊತ್ತಾಗದ ರೀತಿಯಲ್ಲಿ ಆತ ಅತೀ ಸಣ್ಣ ವಿಡಿಯೋ ಕ್ಯಾಮೆರಾ ಕಣ್ಣನ್ನು ಕೋಣೆಯ ಸೂರಿನಲ್ಲಿ ತೂತು ಮಾಡಿ ಇರಿಸಿದ್ದ. ಇದಕ್ಕೆ ಯಾವುದೇ ವಯರ್‌ಗಳಿಲ್ಲದಿರುವುದರಿಂದ ಇದು ಯಾರ ಗಮನಕ್ಕೂ ಬರುವಂತಿರಲಿಲ್ಲ. ಹೊಟೇಲಿನವರಿಗಂತೂ ಈ ವಿಷಯವೇ ಗೊತ್ತಿರಲಿಲ್ಲ !

ಈ ಕ್ಯಾಮೆರಾ ಕಣ್ಣಿನ ರಿಮೋಟ್‌ ಮೂಲಕ ಆ ವ್ಯಕ್ತಿ ತಾನಿರುವ ಕಡೆಯಿಂದಲೇ ಅದನ್ನು ಆನ್‌, ಆಫ್ ಮಾಡುತ್ತಿದ್ದ. ಈ ಕಳ್ಳ ಕ್ಯಾಮೆರಾ ಕಣ್ಣು ಚಿತ್ರೀಕರಿಸಿಕೊಳ್ಳುತ್ತಿದ್ದ ಯುವ ಜೋಡಿಗಳ ಸೆಕ್ಸ್‌ ಖಾಸಗೀತನ ಆತ ನೀಟಾಗಿ ತನ್ನ ಕಂಪ್ಯೂಟರ್‌ನಲ್ಲಿ ಡೌನ್‌ ಲೋಡ್‌ ಮಾಡಿಕೊಳ್ಳುತ್ತಿದ್ದ; ಬಳಿಕ ಅವುಗಳನ್ನು ಭಾರೀ ದುಬಾರಿ ಬೆಲೆ ಇಂಟರ್‌ನೆಟ್‌ನಲ್ಲಿ ಮಾರಾಟ ಮಾಡುತ್ತಿದ್ದ. ಅಂತೆಯೇ ಆತನ ಈ ದುಷ್ಕೃತ್ಯದಿಂದ ಅನೇಕಾನೇಕ ಯುವ ಜೋಡಿಗಳ ಕಾಮದಾಟ ಇಂಟರ್‌ನೆಟ್‌ನಲ್ಲಿ ಜಗಜ್ಜಾಹೀರಾಗಿತ್ತು.

ಕೆಲ ದಿನಗಳ ಹಿಂದೆ ಇದೇ ಹೊಟೇಲ್‌ನ ಆ ಕೋಣೆಗೆ ಒಂದು ಯುವ ಜೋಡಿ ಬಂದಿತ್ತು. ಅದು ಹೇಗೋ ಆ ಯುವ ಜೋಡಿಗೆ ಮಂಚದ ಮೇಲಿನ ಸೂರಿನಲ್ಲಿರುವ ತೂತಿನಲ್ಲಿ ಅದೇನೋ ವಸ್ತು ಕಂಡು ಬಂದಿತ್ತು. ಒಡನೆಯೇ ಜಾಗೃತಗೊಂಡ ಈ ಜೋಡಿ ತಾವು ಪತ್ತೆ ಹಚ್ಚಿದ ವಸ್ತು ವಿಡಿಯೋ ಕ್ಯಾಮೆರಾ ಕಣ್ಣು ಎನ್ನುವುದು ಖಚಿತವಾಯಿತು. ಕೂಡಲೇ ಈ ಜೋಡಿ ಹೊಟೇಲ್‌ ಆಡಳಿತಕ್ಕೆ ಮತ್ತು ಪೊಲೀಸರಿಗೆ ದೂರು ನೀಡಿತು.

ಪೊಲೀಸರು ಈ ಕ್ಯಾಮೆರಾ ಕಣ್ಣಿನ ಜಾಡನ್ನು ಅರಸುತ್ತಾ, ಅದನ್ನು ಯಾರಿಗೂ ಕಾಣದಂತೆ ಇರಿಸಿದ್ದ ವ್ಯಕ್ತಿಯ ನಿವಾಸವನ್ನು ತಲುಪಿದರು. ಅಲ್ಲಿದ್ದ ಆ ಕಳ್ಳ ಖದೀಮನನ್ನು ಬಂಧಿಸಿದರು. ಆತನ ಕಂಪ್ಯೂಟರ್‌ನಲ್ಲಿ ಆತ ಶೇಖರಿಸಿಟ್ಟಿದ್ದ ವಿವಿಧ ಜೋಡಿಗಳ ಸುಮಾರು 3 ಟೆರಾಬೈಟ್‌ ಸೆಕ್ಸ್‌ ವಿಡಿಯೋ ಡಾಟಾವನ್ನು ಮತ್ತು ಹಾರ್ಡ್‌ ಡಿಸ್ಕ್ ಅನ್ನು ವಶಪಡಿಸಿಕೊಂಡರು.

ಆರೋಪಿಯು ಈ ಸೆಕ್ಸ್‌ ವಿಡಿಯೋ ಪ್ರದರ್ಶಿಸುವ ತನ್ನದೇ ಆದ ಆನ್‌ಲೈನ್‌ ಸೈಟ್‌ ಕೂಡ ಆರಂಬಿಸಿದ್ದ. ತಿಂಗಳ ಶುಲ್ಕ ಪಾವತಿಯ ಮೇಲೆ ಅನೇಕ ಸದಸ್ಯರನ್ನೂ ನೋಂದಾಯಿಸಿಕೊಂಡಿದ್ದ. ಈಗಿನ್ನು ಪೊಲೀಸರು ಈ ಆನ್‌ಲೈನ್‌ ಸೈಟಿನ ಸದಸ್ಯತ್ವ ಪಡೆದವರ ವಿರುದ್ಧ ಕೂಡ ಕಾನೂನು ಕ್ರಮ ಜರುಗಿಸುತ್ತಾರೋ ಎಂಬುದು ಗೊತ್ತಾಗಿಲ್ಲ.

ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌ ಈ ಕಳ್ಳ ಖದೀಮನು ನಡೆಸಿದ್ದ ಸೆಕ್ಸ್‌ ವಿಡಿಯೋ ಕ್ಯಾಮೆರಾ ಕಣ್ಣಿನ ಪ್ರಹಸವನ್ನು ವರದಿ ಮಾಡಿದೆ.

Comments are closed.