ಅಂತರಾಷ್ಟ್ರೀಯ

ಯುವತಿಯ ಜೀವ ಉಳಿಸುವುದು ಬಿಟ್ಟು ಆತ್ಮಹತ್ಯೆಗೆ ಪ್ರಚೋದನೆ!

Pinterest LinkedIn Tumblr


ಬೀಜಿಂಗ್: ಆತ್ಮಹತ್ಯೆಗೆ ಯತ್ನಿಸಿದವರನ್ನು ರಕ್ಷಿಸೋದು ಮಾನವೀಯತೆ. ಆದರೆ ಅದಕ್ಕೆ ತದ್ವಿರುದ್ಧವಾದ ಘಟನೆ ಇದಾಗಿದೆ. ಕಟ್ಟಡವೊಂದರಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸುತ್ತಿದ್ದ ಯುವತಿಯೊಬ್ಬಳಿಗೆ ಬಿಲ್ಡಿಂಗ್ ನ ಕೆಳಗಡೆ ನೆರೆದಿದ್ದ ಜನರೇ ಕುಮ್ಮಕ್ಕು ನೀಡಿ ಆತ್ಮಹತ್ಯೆಗೆ ಕಾರಣವಾಗಿದ್ದಾರೆ!

ಈ ಘಟನೆ ನಡೆದಿರುವುದು ಚೀನಾದ ಗಾನ್ಸು ಪ್ರಾಂತ್ಯದಲ್ಲಿ. ಇದೀಗ ಪ್ರಕರಣ ಭಾರೀ ಆಕ್ರೋಶ ಹಾಗೂ ಟೀಕೆಗೆ ಕಾರಣವಾಗಿದೆ. ಜೀವಕಳೆದುಕೊಳ್ಳಲು ಪ್ರೇರೇಪಿಸಿದ್ದ ಹಲವು ದಾರಿಹೋಕರನ್ನು ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.

19 ವರ್ಷದ ಲೀ ಎಂಬ ಯುವತಿ ಚೀನಾದ ವಾಯುವ್ಯ ಪ್ರದೇಶದ ಕ್ವಿಂಗ್ ಯಾಂಗ್ ನ ಕಟ್ಟಡವೊಂದರ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಳು. ಈ ವೇಳೆ ಇದನ್ನು ಕಂಡ ಸಾರ್ವಜನಿಕರು ಕಟ್ಟಡದಿಂದ ಕೆಳಗೆ ಹಾರುವಂತೆ ಪ್ರೇರೇಪಿಸಿದ್ದರು. ಅದರಂತೆ ನೋಡ, ನೋಡುತ್ತಿದ್ದಂತೆಯೇ ಲೀ ಕಟ್ಟಡದಿಂದ ಕೆಳಗೆ ಜಿಗಿದು ಪ್ರಾಣಕಳೆದುಕೊಂಡಿದ್ದಳು. ಅಷ್ಟೇ ಅಲ್ಲ ಆಕೆ ಸಾವನ್ನಪ್ಪಿದ್ದ ಬಳಿಕ ನೆರೆದಿದ್ದವರು ನಕ್ಕಿರುವುದಾಗಿ ಚೀನಾ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

2016ರಲ್ಲಿ ಕಾಮುಕ ಶಿಕ್ಷಕನೊಬ್ಬ ಲೀ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ, ಈ ಘಟನೆ ನಂತರ ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಇದರಿಂದಾಗಿ ಲೀ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಂದೆ ಮಾಹಿತಿ ನೀಡಿದ್ದಾರೆ.

ಈ ಘಟನೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಾನಸಿಕ ಒತ್ತಡಕ್ಕೊಳಗಾಗಿದ್ದ ಯುವತಿಯನ್ನು ರಕ್ಷಿಸೋದನ್ನು ಬಿಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವವರ ಮನಸ್ಥಿತಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Comments are closed.