
ಇಸ್ಲಾಮಾಬಾದ್: 2008ರ ಮುಂಬಯಿ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬ ತಮ್ಮ ಬಹಿರಂಗ ಹೇಳಿಕೆಯನ್ನು ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪರಿಣಾಮ ಏನೇ ಆದರೂ ಎದುರಿಸಲು ಸಿದ್ಧ ಎಂದೂ ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ರಾಜಾರೋಷವಾಗಿ ಸಕ್ರಿಯವಾಗಿರುವುದನ್ನು ಇದೇ ಮೊದಲ ಬಾರಿಗೆ ಷರೀಫ್ ಟಿವಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಈ ರೀತಿ ಸರಕಾರೇತರ ಶಕ್ತಿಗಳು ಗಡಿದಾಟಿ ಮುಂಬಯಿಯಲ್ಲಿ ಅಮಾಯಕರ ಹತ್ಯೆಗೆ ಅವಕಾಶ ನೀಡಿರುವ ನೀತಿಯನ್ನು ಅವರು ಪ್ರಶ್ನಿಸಿದ್ದರು.
ಷರೀಫ್ ಹೇಳಿಕೆಯಿಂದ ಪಾಕ್‌ನಲ್ಲಿ ತೀವ್ರ ವಿವಾದ ಭುಗಿಲೆದ್ದಿದ್ದು, ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಉನ್ನತ ಮಟ್ಟದ ಸಭೆ ನಡೆಸಿ ಷರೀಫ್ ಹೇಳಿಕೆಯನ್ನು ತಿರಸ್ಕರಿಸಿತ್ತು. ಅದು ಸರಿಯಲ್ಲ ಹಾಗೂ ದಾರಿ ತಪ್ಪಿಸುವಂಥದ್ದು ಎಂದು ಎನ್‌ಎಸ್‌ಸಿ ಬಣ್ಣಿಸಿತ್ತು. ಪದಚ್ಯುತ ಪ್ರಧಾನಿಯ ಹೇಳಿಕೆಗೆ ಯಾವುದೇ ಆಧಾರವಿಲ್ಲ ಮತ್ತು ವಾಸ್ತವಾಂಶಗಳಿಂದ ಕೂಡಿಲ್ಲ ಎಂದು ಎನ್‌ಎಸ್‌ಸಿ ಹೇಳಿಕೆ ನೀಡಿತ್ತು.
‘ಮುಂಬಯಿ ದಾಳಿಗೆ ಭಾರತವೇ ಹೊಣೆಯಾಗಿದೆ ಹೊರತು, ಪಾಕಿಸ್ತಾನವಲ್ಲ. ತನಿಖೆಯ ಅವಧಿಯಲ್ಲಿ ಪ್ರಮುಖ ಆರೋಪಿ ಅಜ್ಮಲ್ ಕಸಬ್ ವಿಚಾರಣೆಗೆ ಅವಕಾಶವೂ ಸೇರಿದಂತೆ ಹಲವು ಕೋರಿಕೆಗಳನ್ನು ಭಾರತ ತಿರಸ್ಕರಿಸಿತ್ತು. ಅಲ್ಲದೆ ಆತನಿಗೆ ಗಲ್ಲು ಶಿಕ್ಷೆಯನ್ನೂ ತರಾತುರಿಯಲ್ಲಿ ವಿಧಿಸಿತು. ಹೀಗಾಗಿ ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಪಾಕ್ ಪಾತ್ರವಿದೆ ಎಂಬ ಆರೋಪಕ್ಕೆ ಯಾವುದೇ ಪುರಾವೆಯಿಲ್ಲ’ ಎಂದು ಎನ್‌ಎಸ್‌ಸಿ ಹೇಳಿದೆ.
Comments are closed.