ರಾಷ್ಟ್ರೀಯ

35 ಲಕ್ಷ ರೂ.ಗೆ 100 ಕೋಟಿ ಮೌಲ್ಯದ ವಕ್ಫ್‌ ಭೂಮಿ ಮಾರಾಟ

Pinterest LinkedIn Tumblr


ಹೈದರಾಬಾದ್: ತೆಲಂಗಾಣದಲ್ಲಿ 100 ಕೋಟಿಗೂ ಅಧಿಕ ಮೌಲ್ಯದ 5 ಎಕರೆ ವಕ್ಫ್‌ ಭೂಮಿಯನ್ನು ಕೇವಲ 35 ಲಕ್ಷ ರೂ.ಗೆ ಮಾರಲಾಗಿದೆ. ಮೇ 2017 ರಂದು ನಡೆದಿದ್ದ ಘಟನೆ ಒಂದು ವರ್ಷದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.

ತೆಲಂಗಾಣದ ಮಲ್ಕಾಜ್‌ಗಿರಿಯಲ್ಲಿರುವ ಮೀರ್ ಮಹ್ಮೂದ್ ಪಹಡಿ ಎಂಬುವರಿಗೆ ಸೇರಿದ ಭೂಮಿಯನ್ನು ಕೇವಲ 35 ಲಕ್ಷ ರೂ.ಗೆ ಮಾರಿರುವುದು ಒಂದು ವರ್ಷದ ಬಳಿಕ ಭಾನುವಾರ ಬೆಳಕಿಗೆ ಬಂದಿದೆ. ಈ ಕುರಿತು ಸಿಐಡಿ ತನಿಖೆ ನಡೆಸುವಂತೆ ತೆಲಂಗಾಣ ಸರಕಾರಕ್ಕೆ ಪತ್ರ ಬರೆಯಲು ತೆಲಂಗಾಣ ರಾಜ್ಯ ವಕ್ಫ್‌ ಮಂಡಳಿ ನಿರ್ಧರಿಸಿದೆ. ತೆಲಂಗಾಣದ ಅಟ್ಟಾಪುರ ಹಾಗೂ ಮಲ್ಕಾಜ್‌ಗಿರಿಯಲ್ಲಿ ವಕ್ಫ್‌ ಮಂಡಳಿಗೆ ಸೇರಿದ ಸಾಕಷ್ಟು ಭೂಮಿ ಇದೆ.

ಇತ್ತೀಚಿನವರೆಗೆ ವಕ್ಫ್‌ ಮಂಡಳಿಯ ಸಿಇಓ ಆಗಿದ್ದ ಮನ್ನಾನ್ ಫಾರೂಕಿ, ಈ 5 ಎಕರೆ ಮೌಲ್ಯದ ಖಾಸಗಿ ಭೂಮಿಯನ್ನು ಪಡೆದುಕೊಳ್ಳಲು ನಿರಾಕ್ಷೇಪಣಾ ಪತ್ರ ನೀಡಿದರು. ಅಲ್ಲದೆ, ಇದಕ್ಕೆ 25 ಲಕ್ಷ ಲಂಚ ಪಡೆದುಕೊಂಡಿದ್ದರು ಎಂದು ಎನ್ನಲಾಗಿದೆ. ಹಾಗೂ, ಈ ಡೀಲ್ ಅನ್ನು ಕುದುರಿಸಲು ಮಧ್ಯವರ್ತಿಗೆ 10 ಲಕ್ಷ ನೀಡಿದರು ಎಂದು ತಿಳಿದುಬಂದಿದೆ. ವಕ್ಫ್‌ ಮಂಡಳಿಗೆ ಸೇರಿದ ಪ್ರಮುಖ ಫೈಲ್‌ಗಳನ್ನು ಫಾರೂಕಿ ನೀಡಿರಲಿಲ್ಲ. ಬಳಿಕ ಅವರು ಇದ್ದಕ್ಕಿದ್ದಂತೆ ರಜೆ ಮೇಲೆ ತೆರಳಿ, ಕಾನೂನು ಇಲಾಖೆಯ ಮೊರೆ ಹೋಗಿದ್ದರು. ಹಾಗೆ, ಹಳೆಯ ಕಂಪನಿಗೆ ವಾಪಸಾಗಿದ್ದರು. ಇದರಿಂದ ನಮಗೆ ಅನುಮಾನ ಬಂದು ಈ ಕುರಿತು ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಹಾಗೂ, 35 ಲಕ್ಷ ರೂ. ಲಂಚ ನೀಡಿ ಎನ್‌ಒಸಿ ಪಡೆದುಕೊಂಡಿದ್ದನ್ನು ಭೂಮಿ ಪಡೆದವ ಒಪ್ಪಿಕೊಂಡಿದ್ದಾನೆ ಎಂದು ವಕ್ಫ್‌ ಮಂಡಳಿ ಮುಖ್ಯಸ್ಥ ಮೊಹಮ್ಮದ್ ಸಲೀಂ ಹೇಳಿದ್ದಾರೆ.

ಭೂಮಿ ಮಾರಿರುವುದರ ಬಗ್ಗೆ ಅಬೀಡ್ಸ್‌ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜತೆಗೆ, ಈ ಕುರಿತು ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮನವಿ ಮಾಡುವುದಾಗಿ ವಕ್ಫ್‌ ಮಂಡಳಿ ಮುಖ್ಯಸ್ಥ ಮೊಹಮ್ಮದ್ ಸಲೀಂ ಹೇಳಿದ್ದಾರೆ. ಅಲ್ಲದೆ, 1956 ರಿಂದ ಇಲ್ಲಿಯವರೆಗೆ ಪಡೆದುಕೊಂಡಿರುವ ನಿರಾಕ್ಷೇಪಣಾ ಪತ್ರದ ಕುರಿತು ತನಿಖೆ ನಡೆಸುವಂತೆಯೂ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್‌ಗೆ ಪತ್ರ ಬರೆಯುವ ಬಗ್ಗೆಯೂ ಸಲೀಂ ಮಾತನಾಡಿದ್ದಾರೆ. ಅಲ್ಲದೆ, ತಪ್ಪಿತಸ್ಥರು ಯಾರೇ ಇದ್ದರೂ, ಕಾನೂನು ಪ್ರಕಾರ ಕ್ರಮ ಕೈಗೊಳ್ಳೋದಾಗಿಯೂ ವಕ್ಫ್‌ ಮಂಡಳಿ ಮುಖ್ಯಸ್ಥರು ಭರವಸೆ ನೀಡಿದ್ದಾರೆ.

ಆದರೆ, ಘಟನೆ ಕುರಿತು ಫೋರೆನ್ಸಿಕ್ ಇಲಾಖೆ ಕ್ರಮ ಕೈಗೊಂಡಿದ್ದು, ಎನ್‌ಒಸಿಯನ್ನು ರದ್ದುಗೊಳಿಸಲಾಗಿದೆ ಎಂದು ಮಂಡಳಿಯ ಫೋರೆನ್ಸಿಕ್ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ, ಈ ಫೈಲ್‌ಗೆ ವಕ್ಫ್‌ ಮಂಡಳಿಯ ಸಿಇಓ ಆಗಿದ್ದ ಮನ್ನಾನ್ ಸಹಿ ಹಾಕಿದ್ದು ಧೃಡಪಟ್ಟಿದೆ ಎಂದು ಹೇಳಿದೆ. ಅಲ್ಲದೆ, ಮೆಡ್ಚಲ್ – ಮಲ್ಕಜ್‌ಗಿರಿ ಡಿಸಿಗೆ ಈ ಭೂಮಿಯ ಸರ್ವೇ ನಂಬರ್‌ಗಳನ್ನು ವಕ್ಫ್‌ ಭೂಮಿಯ ಪಟ್ಟಿಯಿಂದ ತೆಗೆದುಹಾಕುವಂತೆ ಪತ್ರ ಬರೆಯಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ಹಗರಣದ ಕುರಿತು ಬಿಜೆಪಿ ನಾಯಕ ಫಿರಾಸತ್ ಅಲಿ ಬಖ್ರಿ ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದು, ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಬೆಳಕಿಗೆ ಬರಲಿದೆ. ಈ ಹಿಂದೆ ಇದೇ ರೀತಿ ಎನ್‌ಒಸಿ ನೀಡಿರುವ ಕುರಿತು ರಾಜ್ಯ ಸರಕಾರ ಗಮನ ವಹಿಸಬೇಕೆಂದು ಬಿಜೆಪಿ ನಾಯಕ ಹೇಳಿದ್ದಾರೆ.

Comments are closed.