ಅಂತರಾಷ್ಟ್ರೀಯ

ಫೇಸ್‌ಬುಕ್ ಬಳಕೆದಾರರ ಮತ್ತಷ್ಟು ಮಾಹಿತಿ ಸೋರಿಕೆ ಆತಂಕ

Pinterest LinkedIn Tumblr


ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್‌ ಬಳಕೆದಾರರ ಮತ್ತಷ್ಟು ಮಾಹಿತಿ ಸೋರಿಕೆಯಾಗಿರಬಹುದು ಎಂದು ಸ್ವತ: ಫೇಸ್‌ಬುಕ್ ಕಂಪನಿ ಆತಂಕ ವ್ಯಕ್ತಪಡಿಸಿದೆ. ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಮಾಹಿತಿ ಸೋರಿಕೆ ಮಾಡಿರುವಂತೆ ಇತರರಿಂದಲೂ ಮಾಹಿತಿ ಸೋರಿಕೆ ಅಥವಾ ಅನಪೇಕ್ಷಿತ ಚಟುವಟಿಕೆಗಳು ನಡೆದಿರಬಹುದು ಎಂದು ಫೇಸ್‌ಬುಕ್ ತನ್ನ ಬಳಕೆದಾರರಿಗೆ ಹಾಗೂ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.

ಬಳಕೆದಾರರ ಡೇಟಾ ದುರುಪಯೋಗ ಅಥವಾ ಇತರ ಅನಪೇಕ್ಷಿತ ಚಟುವಟಿಕೆಗಳು ಮತ್ತಷ್ಟು ಪತ್ತೆಯಾಗುವುದನ್ನು ನಾವು ನಿರೀಕ್ಷಿಸುತ್ತೇವೆ. ಶೀಘ್ರದಲ್ಲೇ ಇದು ಬಹಿರಂಗವಾಗಲಿದೆ ಎಂದು ಫೇಸ್‌ಬುಕ್ ತನ್ನ ತ್ರೈಮಾಸಿಕ ವರದಿಯಲ್ಲಿ ಮಾಹಿತಿ ನೀಡಿದೆ. ಇದನ್ನು ಅಮೆರಿಕದ ಸೆಕ್ಯುರಿಟೀಸ್ ಮತ್ತು ವಿನಿಮಯ ಆಯೋಗದ ಜತೆ ಮಾರ್ಕ್‌ ಜುಕರ್‌ಬರ್ಗ್‌ ನೇತೃತ್ವದ ಫೇಸ್‌ಬುಕ್ ಕಂಪನಿ ಹಂಚಿಕೊಂಡಿದೆ.

ಮಾಧ್ಯಮಗಳು ಹಾಗೂ ಇತರ ವ್ಯಕ್ತಿಗಳಿಂದಲೂ ಇಂತಹ ಮತ್ತಷ್ಟು ಮಾಹಿತಿಗಳು ಪತ್ತೆಯಾಗಲಿವೆ. ಇದರಿಂದ ಬಳಕೆದಾರನ ವಿಶ್ವಾಸದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ನಮ್ಮ ಖ್ಯಾತಿ ಹಾಗೂ ಬ್ರ್ಯಾಂಡ್‌ ಮೌಲ್ಯಕ್ಕೆ ಧಕ್ಕೆಯಾಗಬಹುದು. ಇದರಿಂದ ನಮ್ಮ ವ್ಯವಹಾರ ಹಾಗೂ ಆರ್ಥಿಕ ಫಲಿತಾಂಶದ ಮೇಲೆ ಭಾರೀ ಹೊಡೆತ ಬೀಳಲಿದೆ ಎಂಬುದನ್ನು ಸಹ ಫೇಸ್‌ಬುಕ್ ಕಂಪನಿ ಒಪ್ಪಿಕೊಂಡಿದೆ.

ಇತ್ತೀಚೆಗಷ್ಟೇ, ಬ್ರಿಟಿಷ್ ಮೂಲದ ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆ ಫೇಸ್‌ಬುಕ್‌ನ 8.7 ಕೋಟಿ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಮಾಡಿತ್ತು. ಈ ವೇಳೆ ತನ್ನ ಮಾಹಿತಿ ಸಹ ಸೋರಿಕೆಯಾಗಿತ್ತು ಎಂದು ಫೇಸಬುಕ್ ಸಿಇಓ ಮಾರ್ಕ್‌ ಜುಕರ್‌ಬರ್ಗ್ ಅಮೆರಿಕದ ಸೆನೆಟ್‌ನಲ್ಲಿ ಹೇಳಿಕೊಂಡಿದ್ದರು. ಭಾರತ ಸೇರಿ ಹಲವು ದೇಶಗಳ ಚುನಾವಣೆಯಲ್ಲಿ ಮತದಾರರ ಮೇಲೆ ಪರಿಣಾಮ ಬೀರಲು ಬ್ರಿಟಿಷ್ ಮೂಲದ ಸಂಸ್ಥೆಯನ್ನು ಬಳಸಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷ ಸಹ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು.

Comments are closed.