ಅಂತರಾಷ್ಟ್ರೀಯ

ಹಫೀಜ್ ಸಯ್ಯೀದ್ ನೇತೃತ್ವದ ಎಂಎಂಎಲ್ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ; ಸಯ್ಯೀದ್ ಗೆ ಭಾರಿ ಹಿನ್ನಡೆ

Pinterest LinkedIn Tumblr

ವಾಷಿಂಗ್ಟನ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಉಗ್ರ ಹಫೀಜ್ ಸಯ್ಯೀದ್ ಗೆ ಭಾರಿ ಹಿನ್ನಡೆಯಾಗಿದ್ದು, ಸಯ್ಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ಸಂಘಟನೆಯನ್ನು ಅಮೆರಿಕ ವಿದೇಶಿ ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದೆ.

ಅಷ್ಟು ಮಾತ್ರವಲ್ಲದೆ ಎಂಎಂಎಲ್ ನ 7 ಸದಸ್ಯರನ್ನೂ ಕೂಡ ವಿದೇಶಿ ಉಗ್ರರು ಎಂದು ಪರಿಗಣಿಸಿದೆ. ಪೆಂಟಗನ್ ಇಂದು ತನ್ನ ನೂತನ ವಿದೇಶಿ ಉಗ್ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ತೆಹ್ರೀಕ್ ಇ ಆಜಾದಿ ಇ ಕಾಶ್ಮೀರಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳನ್ನು ಉಗ್ರ ಪಟ್ಟಿಗೆ ಸೇರಿಸಿದೆ. ಟಿಎಜೆಕೆ (ತೆಹ್ರೀಕ್ ಇ ಆಜಾದಿ ಇ ಕಾಶ್ಮೀರಿ) ಸಂಘಟನೆ ಲಷ್ಕರ್ ಇ ತೊಯ್ಬಾ ಅಂಗ ಸಂಘಟನೆಯಾಗಿದ್ದು, ಕಾಶ್ಮೀರದಲ್ಲಿ ಇದು ಕಾರ್ಯಾಚರಣೆ ನಡೆಸುತ್ತಿದೆ.

ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಯಾವುದೇ ರೀತಿಯ ತಪ್ಪು ಅಥವಾ ಪ್ರಮಾದಗಳಿಲ್ಲದೆ ಈ ಪಟ್ಟಿ ರಚಿಸಲಾಗಿದೆ. ಹಿಂಸಾ ಮನೋಭಾವ ಹೊಂದಿರುವ ಎಲ್ ಇಟಿ, ಎಂಎಂಎಲ್ ಗಳು ರಾಜಕೀಯ ಧನಿಯಾಗುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕಳೆದ ವಾರವಷ್ಟೇ ಪಾಕಿಸ್ತಾನ ಚುನಾವಣಾ ಆಯೋಗ ಹಫೀಜ್ ಸಯ್ಯೀದ್ ನೇತೃತ್ವದ ಎಂಎಂಎಲ್ ಪಕ್ಷದ ನೊಂದಾವಣಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಕೇಳಿತ್ತು, ಆದರೆ ಎಂಎಂಎಲ್ ಪಾಕಿಸ್ತಾನ ಆಂತರಿತ ಸಚಿವಾಲಯ ಈ ಕ್ಲಿಯರೆನ್ಸ್ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಎಂಎಂಎಲ್ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿ ಪ್ರಮಾಣ ಪತ್ರ ನೀಡಿಕೆಗೆ ನಿರಾಕರಿಸಿತ್ತು. ಪ್ರಮಾಣ ಪತ್ರವಿಲ್ಲದ ಕಾರಣ ಪಾಕಿಸ್ತಾನ ಚುನಾವಣಾ ಆಯೋಗ ಕೂಡ ಎಂಎಂಎಲ್ ಪಕ್ಷದ ನೋಂದಾವಣಿ ನಿರಾಕರಿಸಿತ್ತು.

ಇದರ ಬೆನ್ನಲ್ಲೇ ಅಮೆರಿಕ ಸರ್ಕಾರ ಎಂಎಂಎಲ್ ಅನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಣೆ ಮಾಡುವ ಮೂಲಕ ಉಗ್ರ ಹಫೀಜ್ ಸಯ್ಯೀದ್ ನ ರಾಜಕೀಯ ಕನಸಿಗೆ ತಣ್ಣೀರೆರಚಿದೆ.

Comments are closed.