ರಾಷ್ಟ್ರೀಯ

ಮಲೇಷ್ಯಾ ಬಳಿಕ ಭಾರತದ ಸರದಿ: ಸುಳ್ಳು ಸುದ್ದಿ ಪ್ರಕಟಿಸಿದರೆ ‘ಪತ್ರಕರ್ತರ ಮಾನ್ಯತೆ ಶಾಶ್ವತ ರದ್ದು’!

Pinterest LinkedIn Tumblr

ನವದೆಹಲಿ: ಸುಳ್ಳು ಸುದ್ದಿ ಪ್ರಕಟಿಸಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಲೇಷ್ಯಾ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾದ ಬೆನ್ನಲ್ಲೇ ಇಂತಹುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದುಸುಳ್ಳು ಸುದ್ದಿ ಪ್ರಕಟಿಸಿದರೆ ‘ಪತ್ರಕರ್ತರ ಮಾನ್ಯತೆಯನ್ನೇ ಶಾಶ್ವತವಾಗಿ ರದ್ದು ಮಾಡುವುದಾಗಿ ಹೇಳಿದೆ.

ಭಾರತದಲ್ಲಿ ಸುಳ್ಳು ಸುದ್ದಿ ಸೃಷ್ಟಿಸುವ ಮತ್ತು ಹರಡುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪ್ರಕಟಣೆ ಹೊರಡಿಸಿದ್ದು, ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ತಪ್ಪಿಗೆ ಆರು ತಿಂಗಳ ಮಟ್ಟಿಗೆ ಮತ್ತು ಎರಡನೇ ಬಾರಿಯ ತಪ್ಪಿಗೆ ಒಂದು ವರ್ಷದ ಮಟ್ಟಿಗೆ ಪತ್ರಕರ್ತರ ಮಾನ್ಯತೆ ರದ್ದು ಮಾಡಲಾಗುವುದು. ಮೂರನೇ ಬಾರಿಗೆ ತಪ್ಪು ಮಾಡಿದಲ್ಲಿ ಶಾಶ್ವತವಾಗಿ ಮಾನ್ಯತೆ ರದ್ದು ಮಾಡಲಾಗುವುದು ಎಂದು ಹೇಳಿದೆ.

ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಭಾರತೀಯ ಪತ್ರಿಕಾ ಮಂಡಳಿಗೆ (ಪಿಸಿಐ) ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಸುದ್ದಿ ಪ್ರಸಾರಕರ ಸಂಘಟನೆ (ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್/ಎನ್‌ಬಿಎ)ಗೆ ವಹಿಸಲಾಗುವುದು. ಈ ಸಂಸ್ಥೆಗಳು 15 ದಿನಗಳ ಒಳಗೆ ನಿರ್ಣಯ ಕೈಗೊಳ್ಳಬೇಕೆಂದು ನಿರೀಕ್ಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಅಂತೆಯೇ ಆರೋಪ ದಾಖಲಾದ ತಕ್ಷಣ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನ್ವಯವಾಗುವಂತೆ ಆರೋಪಿ ಪತ್ರಕರ್ತರ ಮಾನ್ಯತೆಯನ್ನು ಅಮಾನತಿನಲ್ಲಿಡಲಾಗುತ್ತದೆ. ಯಾವುದೇ ಸುದ್ದಿ ಮಾಧ್ಯಮ ಸಂಸ್ಥೆಯ ಮಾನ್ಯತಾ ಮನವಿಗೆ ಸಂಬಂಧಿಸಿ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋದ (ಪಿಐಬಿ) ಮಾನ್ಯತಾ ಸಮಿತಿಯು ನಿರ್ಧಾರ ಕೈಗೊಳ್ಳುತ್ತದೆ. ಈ ಸಮಿತಿ ಪಿಸಿಐ ಮತ್ತು ಎನ್‌ಬಿಎ ಪ್ರತಿನಿಧಿಗಳನ್ನೂ ಒಳಗೊಂಡಿದೆ.

Comments are closed.