ವಾಷಿಂಗ್‌ಟನ್: ಪಾಕಿಸ್ತಾನದ ಮೇಲೆ ಅಮೆರಿಕ ನಿರಂತರ ಒತ್ತಡ ಹೇರುತ್ತಿದ್ದರೂ ಅಫ್ಘಾನಿಸ್ತಾನದ ಗಡಿಯಲ್ಲಿರುವ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿಲ್ಲ ಎಂದು ಅಮೆರಿಕ ಸೇನಾ ಮುಖ್ಯಸ್ಥ ಜೋಸೆಫ್ ಎಲ್ ವೋಟೆಲ್ ತಿಳಿಸಿದ್ದಾರೆ.
ಈ ಕುರಿತು ಶ್ವೇತಭವನದ ಸಶಸ್ತ್ರ ಪಡೆಗಳ ಸಮಿತಿ ಸಭೆ ಸೇರಿದ್ದ ಸಂದರ್ಭ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವೋಟೆಲ್ “ಪಾಕಿಸ್ತಾನದಲ್ಲಿ ಸುರಕ್ಷಿತ ತಾಣಗಳನ್ನು ಹೊಂದಿದ್ದು ಪ್ರದೇಶದಲ್ಲಿ ಸಾಕಷ್ಟು ಬೆಂಬಲ ಪಡೆಯುತ್ತಿರುವ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಯಶ ಕಾಣುತ್ತಿದೆ” ಎಂದು ಹೇಳಿದ್ದಾರೆ.
“ಕ್ವೆಟ್ಟಾ ಹಾಗು ಅಫ್ಘನ್ ಗಡಿ ನಡುವಿನ ಪ್ರದೇಶದಲ್ಲಿ ತಾಲಿಬಾನ್‌ಗೆ ಐಎಸ್‌ಐ ರಕ್ಷಣೆ ಹಾಗು ಸಂಪನ್ಮೂಲಗಳನ್ನು ಒದಗಿಸುತ್ತಿದೆ” ಎಂದು ವೋಟೆಲ್ ಇದೇ ಸಂದರ್ಭ ತಿಳಿಸಿದ್ದಾರೆ.
ಈ ಕುರಿತು ವಾಷಿಂಗ್‌ಟನ್ ಟೈಮ್ಸ್ ವರದಿ ಮಾಡಿದ್ದು “ಕ್ವೆಟ್ಟಾ ಬಳಿಯ ಪಶ್ತೂನ್ ಪ್ರದೇಶಗಳಲ್ಲಿ ಧಾರ್ಮಿಕ ಸಂಘಟನೆಗಳು ಮದ್ರಸಾಗಳನ್ನು ನಡೆಸುತ್ತಿವೆ. ಈ ಸಂಘಟನೆಗಳ ಪೈಕಿ ಜಾಮಿಯಾತ್ ಉಲೇಮಾ-ಎ-ಇಸ್ಲಾಮ್ ಸಾಕಷ್ಟು ಕ್ರಿಯಾಶೀಲವಾಗಿದೆ. ಈ ಮದ್ರಸಾಗಳ ಮುಖಾಂತರ ತಾಲಿಬಾನ್‌ಗೆ ಇನ್ನಷ್ಟು ಭಯೋತ್ಪಾದಕರನ್ನು ಹುಟ್ಟುಹಾಕಲಾಗುತ್ತಿದೆ” ಎಂದು ತಿಳಿದುಬಂದಿದೆ.
“ತಾಲಿಬಾನ್ ಮುಜಾಗಹಿದೀನ್‌ಗಳು ಕ್ವೆಟ್ಟಾ ಹಾಗು ಸುತ್ತಲಿನ ಪ್ರದೇಶಗಳಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾರೆ. ಐಎಸ್‌ಐ ಹಾಗು ಮಿಲಿಟರಿ ಹಿಡಿತದಲ್ಲಿರುವ ನಾಗರಿಕ ಪೊಲೀಸರು ಈ ವಿಚಾರವಾಗಿ ಏನೂ ಮಾಡಲಾರರು. ಅಧಿಕಾರವಿರದ ಪೊಲೀಸರು ಸದಾ ಜೀವಭಯದಲ್ಲೇ ಕೆಲಸ ಮಾಡುತ್ತಾರೆ” ಎಂದು ತಿಳಿದುಬಂದಿದೆ.
Comments are closed.