ಅಂತರಾಷ್ಟ್ರೀಯ

ಮಧ್ಯರಾತ್ರಿ ಬೆಲ್‌ ಬಾರಿಸಿ ಪರಾರಿ: ಪಾಕ್‌ನಲ್ಲಿ ಭಾರತೀಯ ರಾಜತಾಂತ್ರಿಕರಿಗೆ ನಾನಾ ಕಿರುಕುಳ

Pinterest LinkedIn Tumblr


ಇಸ್ಲಾಮಾಬಾದ್‌: ಮಧ್ಯರಾತ್ರಿ ಬಾಗಿಲಿನ ಬೆಲ್‌ ಬಾರಿಸಿ ಪರಾರಿಯಾಗುವುದು, ಅಶ್ಲೀಲ ಫೋನ್‌ ಕರೆಗಳು, ವಿದ್ಯುತ್‌ ಮತ್ತು ನೀರಿನ ಸಂಪರ್ಕ ಕಡಿತ, ಕಾರನ್ನು ಬೆನ್ನಟ್ಟುವುದು, ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸುವುದು, ಮಕ್ಕಳನ್ನು ಬೆದರಿಸುವುದು- ಇವೆಲ್ಲ ಭಾರತೀಯ ದೂತಾವಾಸದ ಹಿರಿಯ ಅಧಿಕಾರಿಗಳಿಗೆ ಪಾಕಿಸ್ತಾನ ನೀಡುತ್ತಿರುವ ಕಿರುಕುಳದ ಕೆಲವು ಸ್ಯಾಂಪಲ್‌ಗಳು…

ನೆರೆಹೊರೆಯವರ ಜಗಳದಲ್ಲಿ ಇವೆಲ್ಲ ಸಾಮಾನ್ಯ ಅಂದುಕೊಂಡರೂ, ಅಣ್ವಸ್ತ್ರ ಸಜ್ಜಿತ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂತಹ ಬೆಳವಣಿಗೆಗಳು ಅತ್ಯಂತ ಗಂಭೀರವಾಗಿದೆ. 1947ರಿಂದೀಚೆಗೆ ಮೂರು ಯುದ್ಧಗಳನ್ನು ಮಾಡಿದ್ದರೂ ಜಮ್ಮು ಮತ್ತು ಕಾಶ್ಮೀರ ವಿವಾದ ಇತ್ಯರ್ಥವಾಗಿಲ್ಲ. ಇಂದಿಗೂ ಗಡಿಯಲ್ಲಿ ಆಗಾಗ್ಗೆ ಚಕಮಕಿಗಳು ಮುಂದುವರಿದಿವೆ.

ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳು ತಮ್ಮ ಹಿರಿಯ ರಾಜತಾಂತ್ರಿಕರು ಮತ್ತು ಕುಟುಂಬ ಸದಸ್ಯರಿಗೆ
ಇಂತಹ ಕಿರುಕುಳ ನೀಡಲಾಗುತ್ತಿದೆ ಎಂದು ಪರಸ್ಪರ ದೂರಿಕೊಂಡಿವೆ. ಬೆಳಗಿನ ಜಾವ 3 ಗಂಟೆಗೆ ಬಾಗಿಲ ಬೆಲ್‌ ಬಾರಿಸುವುದು, ರಾಜತಾಂತ್ರಿಕರನ್ನು ಭದ್ರತಾ ಸಿಬ್ಬಂದಿಗಳು ಹಿಂಬಾಲಿಸುವುದು, ಅಪರಿಚಿತ ಆಕ್ರಮಣಕಾರರು ಹಠಾತ್ತನೆ ಎದುರಾಗಿ ವೀಡಿಯೋ ಚಿತ್ರೀಕರಿಸಿಕೊಳ್ಳುವುದು- ಮುಂತಾದ ಘಟನೆಗಳು ನಡೆಯುತ್ತಿವೆ.

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸದ ಸಿಬ್ಬಂದಿಗಳಿಗೆ ಬಹಳ ಹಿಂದಿನಿಂದಲೂ ಇಂತಹ ಅನುಭವಗಳು ಆಗುತ್ತಲೇ ಇವೆ ಎನ್ನುತ್ತಾರೆ ನಿವೃತ್ತ ರಾಜತಾಂತ್ರಿಕ ಅಧಿಕಾರಿ ವಿಷ್ಣು ಪ್ರಕಾಶ್‌. ಅವರು ಇಸ್ಲಾಮಾಬಾದ್‌ನಲ್ಲಿ ಭಾರತದ ರಾಜಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದವರು. ತಮಗೂ ಸ್ವತಃ ಇಂತಹ ಅನುಭವಗಳಾಗಿತ್ತು ಎನ್ನುತ್ತಾರೆ ಅವರು.

‘ಇದು ಸಾಮಾನ್ಯ ಕಾರ್ಯಾಚರಣೆ ವಿಧಾನ. ನನಗೂ ಇಂತಹ ಅನುಭವಗಳಾಗಿದ್ದವು. ಕೆಲವು ಐಎಸ್‌ಐ ಬೇಹುಗಾರರು ನನ್ನನ್ನು ಹಿಂಬಾಲಿಸುತ್ತಿದ್ದರು. ನಾನು ವೈದ್ಯರ ಬಳಿಗೆ ಹೋದರೂ ಅವರು ಹೊರಗೆ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದರು’ ಎಂದು ವಿಷ್ಣು ಪ್ರಕಾಶ್‌ ಹೇಳುತ್ತಾರೆ.

ಏಟಿಗೆ ಎದಿರೇಟು ಎಂಬಂತೆ ನಡೆಯುತ್ತಿರುವ ಇಂತಹ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಭಾರತ-ಪಾಕ್‌ ಬಾಂಧವ್ಯ ಮತ್ತಷ್ಟು ಹದಗೆಡುತ್ತಿರುವುದರ ಸೂಚನೆಯಾಗಿದೆ. ಎರಡೂ ದೇಶಗಳು ಶಾಂತಿ ಮಾತುಕತೆಗೆ ಬಹಳಷ್ಟು ಪ್ರಯತ್ನ ಪಟ್ಟಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ತಾವಾಗಿಯೇ ಶಾಂತಿ ಸ್ಥಾಪನೆಯ ಇಂಗಿತ ವ್ಯಕ್ತಪಡಿಸಿದ್ದರೂ ಪ್ರಯೋಜನವಾಗಿಲ್ಲ.

ಗಡಿಯಾಚೆಯಿಂದ ನಡೆಯುತ್ತಿರುವ ಭಯೋತ್ಪಾದನೆ ನಿಂತಿಲ್ಲ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಾಕಿಸ್ತಾನವೂ ಆಗಾಗ್ಗೆ ಆರೋಪಿಸುತ್ತಲೇ ಬಂದಿದೆ.

ಹೊಸದಿಲ್ಲಿಯಲ್ಲಿರುವ ಪಾಕ್ ದೂತಾವಾಸದ ಅಧಿಕಾರಿಗಳು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಕೆಲವು ದೂರುಗಳನ್ನು ಸಲ್ಲಿಸಿದ ಬಳಿಕ ಮತ್ತೊಂದು ಸುತ್ತಿನ ವಿವಾದ ತಲೆದೋರಿದೆ.

Comments are closed.