ವಾಷಿಂಗ್‌ಟನ್: ಇತ್ತೀಚಿನ ದಿನಗಳಲ್ಲಿ ಅಮೆರಿಕದ ಪ್ರಭಾವದಿಂದ ಕೈಜಾರುತಿರುವ ಪಾಕಿಸ್ತಾನ ಚೀನಾದೆಡೆಗೆ ಹೆಚ್ಚು ವಾಲುತ್ತಿದೆ ಎಂದು ಗುಪ್ತಚರ ಇಲಾಖೆಗಳು ಅಮೆರಿಕದ ಟ್ರಂಪ್ ಸರಕಾರಕ್ಕೆ ತಿಳಿಸಿವೆ.
“2019ರ ವೇಳೆಗೆ ಅಮೆರಿಕದ ನೆರಳಿನಿಂದ ಆಚೆ ಬಂದು ಪಾಕ್ ಸಂಪೂರ್ಣ ಚೀನಾ ತೆಕ್ಕೆಗೆ ಬೀಳಲಿದ್ದು ದಕ್ಷಿಣ ಏಷ್ಯಾ ಪ್ರದೇಶಲ್ಲಿ ವಾಷಿಂಗ್‌ಟನ್‌ನ ಹಿತಾಸಕ್ತಿಗೆ ಪ್ರತಿಕೂಲವಾಗಲಿದೆ” ಎಂದು ಅಮೆರಿಕದ 17 ಪ್ರಮುಖ ಗುಪ್ತಚರ ಸಂಸ್ಥೆಗಳು ಕಾಂಗ್ರೆಸ್‌ಗೆ ಎಚ್ಚರಿಸಿವೆ.
ತನ್ನ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಲ್ಲದೇ ಭಯೋತ್ಪಾದಕರೊಂದಿಗೆ ತನ್ನ ಸಂಬಂಧ ಕಾಪಾಡಿಕೊಂಡು, ಭಯೋತ್ಪಾದನೆ ವಿರೋಧಿ ಕಾರ್ಯಚರಣೆಯನ್ನು ನಿಯಂತ್ರಿಸುವುದಲ್ಲದೇ ಚೀನಾಗೆ ಮತ್ತಷ್ಟು ನಿಕಟವಾಗುವ ಮೂಲಕ ಅಮೆರಿಕದ ಹಿತಾಸಕ್ತಿಗಳಿಗೆ ಇಸ್ಲಾಮಾಬಾದ್ ಆತಂಕ ತರುವ ಸಾಧ್ಯತೆ ಇದೆ ಎಂದು ಸಿಐಎ, ಎಫ್‌ಬಿಐ ಸೇರಿದಂತೆ ಪ್ರಮುಖ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಪಾಕಿಸ್ತಾನಲ್ಲಿ ರಕ್ಷಣೆ ಪಡೆದು ಭಾರತ ಹಾಗು ಅಫ್ಘಾನಿಸ್ತಾನದ ಮೇಲೆ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವುದು ಮುಂದುವರೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಭಾರತ-ಪಾಕ್ ಹಾಗು ಭಾರತ-ಚೀನಾ ಸಂಬಂಧಗಳಲ್ಲಿ ಸಾಕಷ್ಟು ಉದ್ವಿಗ್ನತೆ ಇರಲಿದೆ ಎಂದು 2019ರ ವೇಳೆಗೆ ಇದು ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಇದೇ ವೇಳೆ ಅಮೆರಿಕದ ಕಠಿಣ ನಿಲುವಿನ ಕುರಿತಂತೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಅಹ್ಸನ್ ಇಕ್ಬಾಲ್ “ಪಾಕಿಸ್ತಾನೀಯರು ಘನತೆ ಇರುವ ಜನರು. ಪರಸ್ಪರ ಗೌರವವಿರುವ ಸ್ನೇಹವನ್ನು ನಾವು ಬಯಸುತ್ತೇವೆ. ಪಾಕ್‌ಅನ್ನು ಬೆದರಿಸುವ ಯಾವುದೇ ಯತ್ನಕ್ಕೆ ಸೂಕ್ತ ಪ್ರತೀಕಾರವಿರಲಿದೆ” ಎಂದಿದ್ದರು.
60,000 ಮಂದಿಯನ್ನು ಭಯೋತ್ಪಾದನೆಯಲ್ಲಿ ಕಳೆದುಕೊಂಡಿರುವ ಪಾಕಿಸ್ತಾನ 25 ಶತಕೋಟಿ ಡಾಲರ್‌ಗಳನ್ನು ಕಳೆದುಕೊಂಡಿದೆ ಎಂದು ಇಕ್ಬಾಲ್ ಇದೇ ವೇಳೆ ತಿಳಿಸಿದ್ದರು.
ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕೆಂದು ಕಳೆದ ಕೆಲ ತಿಂಗಳಿನಿಂದ ಎಚ್ಚರಿಸುತ್ತಲೇ ಇರುವ ಅಮೆರಿಕದ ಟ್ರಂಪ್ ಸರಕಾರ ಇಸ್ಲಾಮಾಬಾದ್‌ಗೆ ನೀಡಬೇಕಿದ್ದ ಎರಡು ಶತಕೋಟಿ ಡಾಲರ್ ಮೌಲ್ಯದ ನೆರವನ್ನು ಸ್ಥಗಿತಗೊಳಿಸಿತ್ತು.
ಸಾಕಷ್ಟು ಎಚ್ಚರಿಕೆಗಳ ನಡುವೆಯೇ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಹಫೀಝ್ ಸಯೀದ್‌ನನ್ನು ಪಾಕ್ ಗೃಹಬಂಧನದಿಂದ ಬಿಡುಗಡೆ ಮಾಡಿತ್ತು. ಅಲ್ಲದೇ ಪಾಕ್ ಚುನಾವಣೆಯಲ್ಲಿ ಭಾಗವಹಿಸುವ ಇರಾದೆಯನ್ನೂ ಸಯೀದ್ ವ್ಯಕ್ತಪಡಿಸಿದ್ದ.
ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಅಮೆರಿಕ, ಬ್ರಿಟನ್, ಜರ್ಮನಿ ಹಾಗು ಫ್ರಾನ್ಸ್ ಆರ್ಥಿಕ ಕ್ರಮ ಟಾಸ್ಕ್ ಫೋರ್ಸ್‌ಗೆ(ಎಫ್‌ಎಟಿಎಫ್) ಆಗ್ರಹಿಸಿದ್ದವು. ಈ ನಡೆಯಿಂದ ಪಾಕಿಸ್ತಾನದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ.
ಸಾಕಷ್ಟು ಒತ್ತಡಕ್ಕೆ ಸಿಲುಕಿರುವ ಪಾಕ್ ಸಯೀದ್‌ನ ಜಮಾತ್ ಉದ್ ದಾವಾ ಸೇರಿದಂತೆ 27 ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವ ಮಸೂದೆಯನ್ನು ತಂದಿತ್ತು.