ರಾಷ್ಟ್ರೀಯ

2008ರ ದೆಹಲಿ ಬಾಂಬ್‌ ಸ್ಫೋಟದ ಪ್ರಮುಖ ರುವಾರಿ ಅರೀಝ್‌ ನೇಪಾಳದಲ್ಲಿ ಬಂಧನ

Pinterest LinkedIn Tumblr


ದೆಹಲಿ: ದೆಹಲಿ, ಜೈಪುರ ಹಾಗು ಅಹಮದಾಬಾದ್‌ನಲ್ಲಿ 2008ರಲ್ಲಿ ಘಟಿಸಿದ ಸರಣಿ ಬಂಬ್‌ ಸ್ಫೋಟ ಪ್ರಕರಣಗಳ ಪ್ರಮುಖ ರುವಾರಿ ಮೊಹಮ್ಮದ್‌ ಅರೀಝ್‌ ಖಾನ್‌ನನ್ನು ಭಾರತದ ಗುಪ್ತಚರ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.

2008ರಲ್ಲಿ ಘಟಿಸಿದ್ದ ಸ್ಫೋಟಗಳಲ್ಲಿ 165 ಮಂದಿ ಮೃತಪಟ್ಟು 535ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದೇ ವರ್ಷ ನಡೆದಿದ್ದ ಬಾಟ್ಲಾ ಹೌಸ್‌ ಎನ್‌ಕೌಂಟರ್‌ ವೇಳೆ ಅರೀಝ್‌ ತಪ್ಪಿಸಿಕೊಂಡಿದ್ದ. ಎನ್‌ಕೌಂಟರ್‌ನಲ್ಲಿ ಇನ್ಸ್‌ಪೆಕ್ಟರ್‌ ಮೋಹನ್‌ ಚಂದ್ ಶರ್ಮ ಹುತಾತ್ಮರಾದರು.

ತನ್ನ ಸಹಚರ ಅಬ್ದುಲ್‌ ಸುಭಾನ್‌ ಕುರೇಶಿಯೊಂದಿಗೆ ನೇಪಾಳದಲ್ಲಿ ತಲೆ ತಪ್ಪಿಸಿಕೊಂಡಿದ್ದ ಅರೀಝ್‌ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಬ್‌ ತಯಾರಿಕೆಯಲ್ಲಿ ಪರಿಣಿತನಾಗಿದ್ದ ಅರೀಝ್‌ ತಲೆ ಮೇಲೆ 15 ಲಕ್ಷ ರುನಷ್ಟು ಇನಾಮಿತ್ತು. ಅಲ್ಲದೇ ಆತನ ಮೇಲೆ ರೆಡ್‌ ಕಾರ್ನರ್‌ ನೊಟೀಸ್‌ ಕೂಡಾ ಹೊರಡಿಸಲಾಗಿತ್ತು.

ಭಾರತ, ನೇಪಾಳ ಹಾಗು ಸೌದಿ ಅರೇಬಿಯಾ ನಡುವೆ ಓಡಾಡಿಕೊಂಡಿದ್ದ ಅರೀಝ್‌ ದಶಕದ ಕಾಲ ಭದ್ರತಾ ಸಂಸ್ಥೆಗಳಿಗೆ ತಲೆನೋವಾಗಿದ್ದ. ಡಿಸೆಂಬರ್‌ 2016ರಲ್ಲಿ ಅರೀಝ್‌ ಕಡೆಯ ಬಾರಿ ಸೌದಿ ಅರೇಬಿಯಾದ ದಮ್ಮಮ್‌ನಲ್ಲಿ ಗುಪ್ತಚರ ಏಜೆಂಟ್‌ಗಳ ಕಣ್ಣಿಗೆ ಬಿದ್ದಿದ್ದ.

ಸೆಪ್ಟೆಂಬರ್‌ 13, 2008ರಲ್ಲಿ ದೆಹಲಿಯ ಹಲವೆಡೆ ಬಾಂಬ್‌ಗಳನ್ನು ಇಟ್ಟಿದ್ದ ಅರೀಝ್‌ 30 ಮಂದಿಯ ಸಾವಿಗೆ ಕಾರಣನಾಗಿದ್ದಾನೆ, ಅಲ್ಲದೇ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಇಂಡಿಯಾ ಗೇಟ್‌, ಕನಾಟ್‌ ಪ್ಲೇಸ್‌ ಹಾಗು ಸಂಸತ್‌ ಬೀದಿಯಲ್ಲಿ ಸ್ಫೋಟಗಳ್ಳದೇ ಇದ್ದ ನಾಲ್ಕು ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮಾರ್ಚ್ 2017ರಿಂದ ನೇಪಾಳದಲ್ಲಿ ತಲೆತಪ್ಪಿಸಿಕೊಂಡಿದ್ದ ಅರೀಝ್‌ ಹಾಗು ತೌಕೀರ್‌ನನ್ನು ಗುಪ್ತಚರ ಸಂಸ್ಥೆಗಳು ಬಂಧಿಸುವಲ್ಲಿ ಯಶ ಕಂಡಿವೆ. ತೌಕೀರ್‌ನನ್ನು ಜನವರಿಯಲ್ಲೇ ಭಾರತಕ್ಕೆ ಹಿಡಿದುತರಲಾಯಿತು. ಅರೀಝ್‌ನನ್ನು ಭಾರತ-ನೇಪಾಳ ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರನರಣದಲ್ಲಿ ಮೂರನೇ ಬಂಧನ ಶೀಘ್ರದಲ್ಲೇ ಆಗುವ ಸಾಧ್ಯತೆ ಇದೆ.

ನೇಪಾಳದಲ್ಲಿದ್ದುಕೊಂಡು ಇಂಡಿಯನ್‌ ಮುಜಾಹಿದೀನ್‌ಅನ್ನು ಮರಳಿ ಸಂಘಟಿಸುವ ಕೆಲಸಕ್ಕೆ ಕೈಹಾಕಿದ್ದಾಗಿ ಅರೀಝ್‌ ತನಿಖೆ ವೇಳೆ ತಿಳಿಸಿದ್ದಾನೆ.

ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಬಳಿಕ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಇರಲು ಕೋರಿದ್ದರೂ ಪೊಲೀಸ್‌ ಕ್ರಮದ ಭೀತಿಯಿಂದ ತನಗೆ ಯಾರೂ ಸಹಾಯ ಮಾಡಲಿಲ್ಲ ಎಂದು ಅರೀಝ್‌ ಇದೇ ಸಂದರ್ಭ ತಿಳಿಸಿದ್ದಾನೆ.

ಬಳಿಕ ತನ್ನ ಸಹೋದರ ಸಂಬಂಧಿ ಖುರ್ಷಿದ್‌ ಆಲಂ ಮೂಲಕ ನೇಪಾಳದಲ್ಲಿದ್ದ ನಿಜಾಮ್‌ ಖಾನ್‌ನ ಸಂಪರ್ಕ ಬೆಳೆಸಿಕೊಂಡ ಅರೀಝ್ ವಾರಣಾಸಿಯಿಂದ ತೆರಳಿ ಬಿಹಾರದ ಮೂಲಕ ಮುಕ್ತ ಗಡಿ ದಾಟಿ ನಿಜಾಮನ ಮೂಲಕ ಹಣ ಪಡೆದು ನೇಪಾಳದಲ್ಲೇ ನೆಲೆಸಿದ್ದ.

ನೇಪಾಳದಲ್ಲಿರಲು ಅವಕಾಶ ಮಾಡಿಕೊಟ್ಟ ನಿಜಾಮ್‌ ಅರೀಝ್‌ಗೆ ಮುಂದಿನ ದಿನಗಳಲ್ಲಿ ಮೊಹಮ್ಮದ್‌ ಸಲೀಂ ಹೆಸರಲ್ಲಿ ನೇಪಾಳದ ನಕಲಿ ಪೌರತ್ವ ಕಾರ್ಡ್‌ ಹಾಗು ಪಾಸ್‌ಪೋರ್ಟ್ ಮಾಡಿಸಿಕೊಟ್ಟಿದ್ದ. ಬಳಿಕ ಅಲ್ಲಿ ಢಾಬಾ ಮಾಡಿಕೊಂಡಿದ್ದ ಅರೀಝ್‌ ಕೆಲ ಕಾಲ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ.

ಬಳಿಕ ರಿಯಾಝ್‌ ಭಟ್ಕಳನ ಮೂಲಕ ಸೌದಿಗೆ ತೆರಳಿದ ಅರೀಝ್‌ ಇಂಡಿಯನ್‌ ಮುಜಾಹಿದೀನ್‌ ಮರುಸ್ಥಾಪನೆಗೆ ಆರ್ಥಿಕ ಮೂಲಗಳನ್ನು ಕ್ರೋಢೋಕರಿಸಲು ಆರಂಭಿಸಿದ.

ದೇಶದ ವಿರುದ್ಧ ಯುದ್ಧ ಹಾಗು ವಿಧ್ವಂಸಕ ಕೃತ್ಯಗಳ ತಡೆ ಕಾಯ್ದೆಯಡಿ ಅರೀಝ್‌ ಮೇಲೆ ಪ್ರಕರಣ ದಾಖಲಿಸಲಾಗಿದೆ. ದೆಹಲಿಯಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಭಟ್ಕಳ ಸಹೋದರರ ಮೂಲಕ ಉಡುಪಿಯಿಂದ ಬಾಂಬ್‌ಗಳನ್ನು ತೆಗೆದುಕೊಂಡು ಹೋಗಲಾಗಿತ್ತು. ದೆಹಲಿಯ ವಿವಿಧ ಮಾರುಕಟ್ಟೆಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ತಯಾರಿಸಲು ಅರೀಝ್‌ ಹಾಗು ಆತಿಫ್‌ ಅಮೀನ್‌ ಕಚ್ಛಾ ಪದಾರ್ಥಗಳನ್ನು ಖರೀದಿಸಿದ್ದರು.

Comments are closed.