ಅಂತರಾಷ್ಟ್ರೀಯ

ಭೂಮಿಯಿಂದ 35 ಸಾವಿರ ಅಡಿ ಎತ್ತರದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Pinterest LinkedIn Tumblr

ನ್ಯೂಯಾರ್ಕ್ : ಭೂಮಿಯಿಂದ 35 ಸಾವಿರ ಅಡಿ ಎತ್ತರದಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನದಲ್ಲಿ ನಡೆದ ಈ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಿದವರು ಭಾರತ ಸಂಜಾತ ವೈದ್ಯ ವಿದ್ಯಾರ್ಥಿ ಸಿಜ್ ಹೇಮಲ್ (27).

ಪ್ಯಾರಿಸ್‌ನಿಂದ ನ್ಯೂಯಾರ್ಕ್‌ಗೆ ಬರುತ್ತಿದ್ದ ಏರ್ ಫ್ರಾನ್ಸ್ ವಿಮಾನದಲ್ಲಿದ್ದ 41 ವರ್ಷದ ಮಹಿಳೆಗೆ ನಿಗದಿತ ದಿನಕ್ಕಿಂತ ಒಂದು ವಾರ ಮೊದಲೇ ಹೆರಿಗೆ ಬೇನೆ ಕಾಣಿಸಿಕೊಂಡಿತು. ಆಗ ‘ವಿಮಾನದಲ್ಲಿ ಯಾರಾದರೂ ವೈದ್ಯರಿದ್ದಾರೆಯೇ’ ಎಂದು ಸಿಬ್ಬಂದಿ ವಿಚಾರಿಸಿದಾಗ, ಸಿಜ್ ಸಹಾಯಕ್ಕೆ ಧಾವಿಸಿದರು. ಫ್ರಾನ್ಸ್‌ನಲ್ಲಿ ಮಕ್ಕಳ ತಜ್ಞೆಯಾಗಿರುವ ಡಾ. ಸ್ಟೆಫಾನಿ ಓರ್ಟೊಲನ್ ಅವರೂ ನೆರವಾದರು. ಅರ್ಧ ಗಂಟೆಯಲ್ಲಿ ಹೆರಿಗೆಯಾಯಿತು. ಮಗುವಿನ ಹೊಕ್ಕುಳಬಳ್ಳಿಯನ್ನು ಕತ್ತರಿಸಲು ಮತ್ತು ಕಟ್ಟಲು ಅವರು ಷೂ ಲೇಸ್‌ಬಳಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಗ್ಲಿಕ್‌ಮನ್ ಯುರೊಲಾಜಿಕಲ್ ಆ್ಯಂಡ್ ಕಿಡ್ನಿ ಇನ್‌ಸ್ಟಿಟ್ಯೂಟ್‌ನ ಮೂತ್ರಶಾಸ್ತ್ರ ವಿಭಾಗದಲ್ಲಿ ಹೇಮಲ್ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಆದರೂ ಅಧ್ಯಯನದ ಭಾಗವಾಗಿ ಈವರೆಗೆ 7 ಮಕ್ಕಳ ಹೆರಿಗೆ ಮಾಡಿಸಿದ ಅನುಭವ ಅವರಿಗಿದೆ.

‘ತಾಯಿಯ ಹೊಟ್ಟೆಯು ಬಟ್ಟೆಯಿಂದ ಮುಚ್ಚಿಕೊಂಡಿತ್ತು. ಮೊದಲಿಗೆ ಆಕೆಯ ನೋವು ಕಂಡು ನಾನು ಇದು ಮೂತ್ರಪಿಂಡದ ಸಮಸ್ಯೆ ಇರಬಹುದು ಎಂದುಕೊಂಡೆ. ಆದರೆ ಆಕೆ 39 ವಾರಗಳ ಗರ್ಭಿಣಿ ಎಂಬುದು ನಂತರವಷ್ಟೇ ತಿಳಿಯಿತು’ ಎಂದು ಹೇಮಲ್ ಹೇಳಿದ್ದಾರೆ. ಅವರ ಶ್ರಮಕ್ಕೆ ವಿಮಾನಯಾನ ಸಂಸ್ಥೆಯು ಒಂದು ಬಾಟಲಿ ಷಾಂಪೇನ್ ಹಾಗೂ ಪ್ರಯಾಣದ ವೋಚರ್ ಅನ್ನು ಕೊಡುಗೆಯಾಗಿ ನೀಡಿದೆ. ಡಿಸೆಂಬರ್ 17ರಂದು ಹೆರಿಗೆ ನಡೆದಿದ್ದು, ಮಗುವಿಗೆ ಜೇಕ್ ಎಂದು ಹೆಸರಿಡಲಾಗಿದೆ.

Comments are closed.