ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿ ಸೇನಾನೆಲೆ ಇಲ್ಲ: ಚೀನಾ

Pinterest LinkedIn Tumblr


ಬೀಜಿಂಗ್‌: ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದ ಜಿವಾನಿಯಲ್ಲಿ ಚೀನಾ ಮಿಲಿಟರಿ ನೆಲೆ ಸ್ಥಾಪಿಸಲು ಯೋಜಿಸಿದೆ ಎಂಬ ವರದಿಯಲ್ಲಿ ಹುರುಳಿಲ್ಲ ಎಂದು ಚೀನಾ ಮಂಗಳವಾರ ಹೇಳಿದೆ.

ಜಿವಾನಿಯು ಭಾರತ, ಇರಾನ್‌ ಹಾಗೂ ಅಫಘಾನಿಸ್ತಾನ ಸೇರಿ ಅಭಿವೃದ್ಧಿಪಡಿಸುತ್ತಿರುವ ಛಬಹಾರ್‌ ಬಂದರುಗೆ ಸಮೀಪದಲ್ಲಿದೆ.

ಬೀಜಿಂಗ್‌ ಅಭಿವೃದ್ಧಿಪಡಿಸುತ್ತಿರುವ ಗ್ವಾದರ್‌ ಬಂದರುಗೆ ಕೂಡಾ ಸಮೀಪದ ಜಿವಾನಿಯಲ್ಲಿ ಚೀನಾ ಸೇನಾನೆಲೆ ಸ್ಥಾಪನೆಗೆ ಪಾಕಿಸ್ತಾನ ಅನುಮತಿ ನೀಡಬಹುದು ಎಂದು ‘ವಾಷಿಂಗ್ಟನ್‌ ಟೈಮ್ಸ್‌’ ವರದಿ ಹೇಳಿತ್ತು.

ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಲು ಕಾಂಗ್‌, ”ನೀವು ಯಾವುದರ ಬಗ್ಗೆ ಹೇಳುತ್ತಿದ್ದೀರಿ ಎಂಬುದು ನನಗೆ ಗೊತ್ತೇ ಇಲ್ಲ,” ಎಂದಿದ್ದಾರೆ.

ಉಗ್ರರಿಗೆ ಪಾಕಿಸ್ತಾನ ಆಶ್ರಯ ಒದಗಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಗುಡುಗಿದ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಪಾಕಿಸ್ತಾನವು ಪ್ರಮುಖ ಜಾಗವೊಂದನ್ನು ಚೀನಾಗೆ ಬಳಸಿಕೊಳ್ಳಲು ಹೇಳಿದೆ ಎಂದು ಚೀನಾ ಹಾಗೂ ವಿದೇಶಿ ಮಾಧ್ಯಮಗಳು ಹೇಳಿದ್ದವು.

ಚೀನಾ-ಪಾಕಿಸ್ತಾನ್‌ ಆರ್ಥಿಕ ಕಾರಿಡಾರ್‌ ಯೋಜನೆಯಡಿಯಲ್ಲಿ ದೇಶವು 50 ಶತಕೋಟಿ ಡಾಲರ್‌ ವೆಚ್ಚದಲ್ಲಿ ಪಾಕ್‌ನಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿರುವುದರಿಂದ, ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಟ್ರಂಪ್‌ ಕ್ರಮಗಳಿಂದಾಗಿ ಚೀನಾವು ಪಾಕಿಸ್ತಾನಕ್ಕೆ ಇನ್ನಷ್ಟು ಹತ್ತಿರವಾಗಬಹುದು ಎಂದು ಚೀನೀ ಮಾಧ್ಯಮಗಳು ವಿಶ್ಲೇಷಿಸಿದ್ದವು.

ಸಿಪಿಇಸಿ ವಿಷಯದಲ್ಲಿ ಬೇರೆ ದೇಶಗಳು ಅತಿಯಾದ ಊಹೆಯಲ್ಲಿ ತೊಡಗುವ ಅಗತ್ಯವಿಲ್ಲ ಎಂದು ಲು ಹೇಳಿದ್ದಾರೆ.

Comments are closed.