ಅಂತರಾಷ್ಟ್ರೀಯ

17 ವರ್ಷದ ಬಳಿಕ ಮಿಸ್ ​ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಭಾರತೀಯ ಯುವತಿ

Pinterest LinkedIn Tumblr

ಬೀಜಿಂಗ್: ಭಾರತದ 21 ವರ್ಷದ ಮಾನುಷಿ ಚಿಲ್ಲಾರ್ 17 ವರ್ಷಗಳ ಬಳಿಕ ಮಿಸ್ ​ವರ್ಲ್ಡ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2000ರಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮಿಸ್ ​ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

ಚೀನಾದ ಸನ್ಯಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 108 ದೇಶಗಳ ಸುಂದರಿಯರನ್ನು ಹಿಂದಿಕ್ಕುವ ಮೂಲಕ ಮಾನುಷಿ 2017ರ ಮಿಸ್ ​ವರ್ಲ್ಡ್ ಆಗಿದ್ದಾರೆ. ಮಿಸ್ ಇಂಗ್ಲೆಂಡ್ ಸ್ಟೆಫನಿ ಹಿಲ್ ಮೊದಲ ರನ್ನರ್ ಅಪ್ ಆದರೆ, ಮೆಕ್ಸಿಕೋ ಸುಂದರಿ ಆಂಡ್ರೆಜಾ ಮೆಜಾ ಎರಡನೇ ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಮಾನುಷಿ ಮೂಲತಃ ಹರಿಯಾಣ ರಾಜ್ಯದ ನಿವಾಸಿಯಾಗಿದ್ದು, ನವದೆಹಲಿಯ ಸೇಂಟ್ ಥಾಮಸ್ ಸ್ಕೂಲ್ ಮತ್ತು ಸೋನ್‍ಪೇಟೆಯ ಭಗತ್ ಫೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ.

ಟಾಪ್ 5 ಸ್ಥಾನಕ್ಕೆ ತಲುಪಿದಾಗ ಪ್ರಶ್ನೋತ್ತರ ಸುತ್ತಿನಲ್ಲಿ ಮಾನುಷಿ ಅವರಿಗೆ, ಅತಿ ಹೆಚ್ಚು ಸಂಬಳ ನೀಡುವ ಯಾವ ವೃತ್ತಿಗೆ ನೀವು ಅರ್ಹರು ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ಸಂಬಳ ಯಾವುದೇ ವೃತ್ತಿಯ ಗೌರವವನ್ನು ನಿರ್ಧರಿಸುವದಿಲ್ಲ. ತಾಯಿಯಾಗುವ ವೃತ್ತಿ ಮಹಿಳೆಯ ಜೀವನದಲ್ಲಿ ದೊರೆಯುವ ಅತ್ಯಂತ ಗೌರವಯುತವಾದ ಹುದ್ದೆಯಾಗಿದೆ. ಕೇವಲ ಹಣದಿಂದ ಮಾತ್ರ ಪ್ರೀತಿ ಮತ್ತು ಗೌರವ ಸಿಗುತ್ತದೆ ಎಂಬ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ. ನನ್ನ ತಾಯಿ ನನಗೆ ಜೀವನದ ಅತಿ ದೊಡ್ಡ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಹಾಗಾಗಿ ತಾಯಿಯಾಗುವ ವೃತ್ತಿ ಜಗತ್ತಿನಲ್ಲಿ ಅತ್ಯಂತ ಗೌರವಯುಕ್ತವಾದದದ್ದು ಎಂದು ಮಾನುಷಿ ಭಾವನಾತ್ಮಕವಾಗಿ ಉತ್ತರಿಸಿದರು.

2016ರ ವಿಶ್ವ ಸುಂದರಿ ವಿಜೇತೆ ಪೋಟ್ ರಿಕೊದ ಸ್ಪೆಫನಿ ಡೆಲ್ ವ್ಯಾಲೆ ತಮ್ಮ ಮಿಸ್ ​ವರ್ಲ್ಡ್ ಕಿರೀಟವನ್ನು ಭಾರತೀಯ ಕುವರಿ ಮಾನುಷಿಯರಿಗೆ ತೊಡಿಸಿದರು.

Comments are closed.